ಮುಳ್ಳೇರಿಯ: ಆಧುನಿಕತೆಗೆ ತಕ್ಕಂತೆ ನಮ್ಮ ಜೀವನ ಶೈಲಿ, ಸಂಸ್ಕೃತಿ ಪರಂಪರೆಗಳು ಬದಲಾಗುತ್ತಿವೆ.ಅದೇ ರೀತಿ ವಾಣಿಜ್ಯ ಬೆಳೆಗಳ ಆಕರ್ಷಣೆಯಿಂದ ನಮ್ಮ ಪಾರಂಪರಿಕ ಬೇಸಾಯವೂ ಪದ್ಧತಿಯಲ್ಲೂ ಬಹಳಷ್ಟು ಬದಲಾವಣೆಯಾಗಿದೆ. ನಾಡಿನಲ್ಲಿ ಕಣ್ಮರೆಯಾಗುತ್ತಿರುವ ಪರಂಪರಾಗತ ಕೃಷಿ ಸಂಸ್ಕೃತಿಯನ್ನು ಪುನರುದ್ಧರಿಸಲು ಹಾಗೂ ಬಂಜರು ಭೂಮಿಯನ್ನು ಅಭಿವೃದ್ಧಿಗೊಳಿಸಲು ಕುಟುಂಬಶ್ರೀ ಜಿಲ್ಲಾ ಮಿಷನ್ ನಿರ್ದೇಶದಂತೆ ಬೆಳ್ಳೂರು ಪಂಚಾಯಿತಿ, ಕುಟುಂಬಶ್ರೀ, ಜೆ.ಎಲ್.ಜಿ. ಸದಸ್ಯರ ನೇತೃತ್ವದಲ್ಲಿ ಬೆಳ್ಳೂರು ಗ್ರಾ.ಪಂ. ನೆಟ್ಟಣಿಗೆ ಎಡಮೊಗೇರು ಬಾಲಕೃಷ್ಣ ಅವರ ಗದ್ದೆಯಲ್ಲಿ ಇತ್ತೀಚೆಗೆ ಮಳೆ ಸೊಬಗು ವಿಶೇಷ ಕಾರ್ಯಕ್ರಮ ನಡೆಯಿತು.
ಯುವ ಪೀಳಿಗೆಗೆ ಕೃಷಿ ಪರಂಪರೆಯ ಸಂದೇಶ ರವಾನಿಸಿ ಅವರಲ್ಲಿ ಜಾಗೃತಿ ಮೂಡಿಸುವ, ಕೃಷಿ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಪ್ರಯತ್ನದ ಭಾಗವಾಗಿ ನಡೆದ ಕೃಷಿ ಕ್ರೀಡಾ ಮೇಳವನ್ನು ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು.
ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ, ಯುವ ಸಮೂಹ, ಪುಟ್ಟ ಮಕ್ಕಳು, ವಯೋ ವೃದ್ಧರು, ಕುಟುಂಬಶ್ರೀ ಸದಸ್ಯರು, ಮಹಿಳೆಯರು ನೂಂಜ ಜಂಕ್ಷನ್ ನಿಂದ ಮೆರವಣಿಗೆಯ ಮೂಲಕ ಆಗಮಿಸಿ ಎಡಮುಗೇರು ಕೆಸರು ಗದ್ದೆಗೆ ಧುಮುಕಿದರು.
ಕಾತ್ರ್ಯಾಯಿನಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಊರ ಹಿರಿಯರಾದ ಯಮುನಕ್ಕ 'ಓಬೇಲೆ' ಸೋಬಾನೆ ಹಾಡಿದರು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಓಟ, ರಿಲೇ, ಹಗ್ಗ ಜಗ್ಗಾಟ, ವಾಲೀಬಾಲ್ ಸ್ಪರ್ಧೆಗಳು ನಡೆದವು.ಮಕ್ಕಳನ್ನು ಕೂರಿಸಿ ನಡೆದ ಹಾಳೆ ಎಳೆಯುವ ಸ್ಪರ್ಧೆ, ಬಲೂನ್ ಒಡೆಯುವ ಸ್ಪರ್ಧೆಗಳು ಗಮನ ಸೆಳೆಯಿತು. ಬಾಲ ಸಭೆ ಮಕ್ಕಳು, ಮಹಿಳೆಯರಿಗೆ ಲಿಂಬೆ ಚಮಚ ಓಟ ಸ್ಪರ್ಧೆ ನಡೆಯಿತು. ಮಕ್ಕಳು ಕೆಸರು ಗದ್ದೆಯಲ್ಲಿ ಬಿದ್ದೆದ್ದು ಉತ್ಸಾಹದೊಂದಿಗೆ ಗುರಿ ತಲುಪಲು ದಾಪುಗಾಲು ಇರಿಸಿದರು.
ಕೆಸರಿಗೆ ಕಾಲಿರಿಸದ ಮಂದಿ ಜಾಗರೂಕಕತೆಯೊಂದಿಗೆ ಗದ್ದೆಗೆ ಇಳಿದರೂ ಕೊನೆಗೆ ಕೆಸರು ನೀರಲ್ಲೇ ಮಿಂದೆದ್ದರು. ಕೆಸರು ನೀರಿನ ರೋಮಾಂಚನ ಸ್ಪರ್ಶದಿಂದ ಇದೇ ಕೆಸರಲ್ಲಿ ಬಿತ್ತಿದ ಭತ್ತ ಅನ್ನವಾಗಿ ನಮ್ಮ ಆಹಾರವಾಗುವುದು ಎಂಬ ಕಲ್ಪನೆ ಮೂಡುವಂತಾಯಿತು.ಈ ರೀತಿಯ ವಿಶೇಷ ಅನುಭವಗಳು ಹಳ್ಳಿಗಳಲ್ಲಿ ದೊರೆಯುತ್ತಿದ್ದರೂ ಸಾಮೂಹಿಕ ಪಾಲ್ಗೊಳ್ಳುವಿಕೆ ನೆನಪಿನಿಂದ ಮಾಸದ ವಿಶೇಷ ಅನುಭವವಾಗಿತ್ತು. ಪ್ರೇಕ್ಷಕರ ಹರ್ಷೋದ್ಘಾರ, ಕೇಕೆ, ಚಪ್ಪಾಳೆಗಳು ಸ್ಪರ್ಧಾಳುಗಳಿಗೆ ಪ್ರೋತ್ಸಾಹ ನೀಡಿತು.ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಸ್ಪರ್ಧಾಳುಗಳಿಗೆ ಮತ್ತಷ್ಟು ಉತ್ಸಾಹ ತುಂಬಿತು.
ವಿಶೇಷತೆಗಳು:
ಕಳೆದ ಏಳು ವರ್ಷಗಳಿಂದ ಭತ್ತ ಕೃಷಿ ಮಾಡದೆ ಹಡಿಲು ಬಿದ್ದಿದ್ದ ಎಡಮುಗೇರು ಗದ್ದೆಯ ಕಾಡು ಪೊದೆ ತೆರವು ಗೊಳಿಸಿ, ಸಮತಟ್ಟು ಉಳುಮೆ ಮಾಡಿ, ಬೇಸಾಯದ ಎಲ್ಲಾ ಖರ್ಚುಗಳನ್ನೂ ಶ್ರೀದುರ್ಗಾ ಜೆ.ಎಲ್.ಜಿ.ಗ್ರೂಪ್ ವಹಿಸಿದೆ
ವೇದಿಕೆ, ತಳಿರು ತೋರಣ, ಅಲಂಕಾರ ವಸ್ತುಗಳು ತೆಂಗಿನ ಓಲೆ, ಅಡಕೆ ಹಿಂಗಾರ, ಮಾವಿನ ಎಲೆಗಳಿಂದ ಸಿಂಗರಿಸಲ್ಪಟ್ಟಿದ್ದವು.
ಕೃಷಿ ಪರಂಪರೆಯಲ್ಲಿ ಬೆಳೆದು ಬಂದ ಬೆಳ್ಳೂರಿನ ಹೆಚ್ಚಿನ ಎಲ್ಲಾ ಜನ ಪ್ರತಿನಿಧಿಗಳು, ಕುಟುಂಬಶ್ರೀ, ಜೆ.ಎಲ್.ಜಿ. ಸದಸ್ಯರು ಕಾರ್ಯಕ್ರಮದ ಕೊನೆಗೆ ಸ್ವಂತ ಅನುಭವ, ಉತ್ಸಾಹದಿಂದ ನೇಜಿ ನೆಟ್ಟರು.
ಸ್ಪರ್ಧೆಗಳು ಮುಗಿದು ಬಹುಮಾನ ವಿತರಣೆ, ಧನ್ಯವಾದದೊಂದಿಗೆ ಸಂಪನ್ನಗೊಂಡು ಕತ್ತಲೆ ಆವರಿಸಿದರೂ ಮಕ್ಕಳು ಬಾಹ್ಯ ಪ್ರಪಂಚದ ಅರಿವಿಲ್ಲದೆ ಕೆಸರು ಗದ್ದೆಯ ನೀರಾಟದಲ್ಲಿ ತಲ್ಲೀನರಾಗಿದ್ದರು.
ಜನ ಪ್ರತಿನಿಧಿಗಳು, ಕುಟುಂಬಶ್ರೀ ಎಡಿಎಸ್, ಸಿಡಿಎಸ್ ಪದಾಧಿಕಾರಿಗಳು,ಸದಸ್ಯರು, ಬಾಲ ಸಭಾ ಮಕ್ಕಳು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಪುರಾತನ ಕಾಲದ ಕೃಷಿ, ಗೃಹೋಪಕರಣ, ನೊಗ, ನೇಗಿಲು, ಮರದ ಕಲಶ, ನಾಗರ ಬೆತ್ತದಿಂದ ಹೆಣೆದ ಬುಟ್ಟಿ, ಸೆಗಣಿ ಪತ್ತಣ, ಚೆನ್ನೆ ಮಣೆ ಸೇರಿದಂತೆ ಕ್ರೀಡೆ, ಮನರಂಜನೆ ಉಪಕರಣಗಳು, ಕಂಚಿನ ತಾಂಬೂಲ ಪೆಟ್ಟಿಗೆ, ಸುಣ್ಣದ ಡಬ್ಬ, ತಾಂಬೂಲ ಉಗುಳುವ ಪಾತ್ರೆ ವಸ್ತು ಪ್ರದರ್ಶನದ ವಿಶೇಷ ಆಕರ್ಷಣೆಯಾಗಿತ್ತು.


