ಕಾಸರಗೋಡು: ದೇವರನ್ನು ಒಲಿಸುವ ಮೂಲಕ ಸಂತೃಪ್ತ, ಸಮೃದ್ಧ ಜೀವನ ಸಾಗಿಸಲು ಭಜನೆ ಅತ್ಯಂತ ಶ್ರೇಷ್ಠ ಮಾಧ್ಯಮ. ಭಜನೆಗೆ ಬದ್ಧವಾದರೆ ಬದುಕು ಭದ್ರ. ಅದರಲ್ಲೂ ಕುಣಿತ ಭಜನೆ ಆಸ್ತಿಕ್ಯ ಭಾವವನ್ನು ಉದ್ದೀಪನಗೊಳಿಸಿ ಧಾರ್ಮಿಕ ಜಾಗೃತಿ ಮೂಡಿಸುವ ಪ್ರಬಲ ಪ್ರಕ್ರಿಯೆಯಾಗಿದೆ ಎಂದು ಕುಣಿತ ಭಜನಾ ಗುರು ಪ್ರವೀಣ ಕುಮಾರ್ ಕುಂದಾಪುರ ಹೇಳಿದರು.
ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದಲ್ಲಿ ಭಾನುವಾರ ನಡೆದ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕøತಿಯನ್ನು ಬೆಳೆಸುವಲ್ಲಿ ಮತ್ತು ಉಳಿಸುವಲ್ಲಿ ಭಜನಾ ಸಂಘಗಳ ಪಾತ್ರ ಹಿರಿದು. ದಾಸರ ಪದಗಳು, ಕೀರ್ತನೆಗಳು ಈ ಗಡಿನಾಡಿನಲ್ಲಿ ಕನ್ನಡದ ಅಸ್ತಿತ್ವವನ್ನು ಭದ್ರ ಪಡಿಸುವಲ್ಲಿ ಪ್ರಮುಖ ಸ್ಥಾನ ವಹಿಸಿದೆ ಎಂದು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಹೇಳಿದರು.
ಪರಂಗಪರಾಗತ ಕುಣಿತ ಭಜನೆ ಇದೀಗ ಮತ್ತೆ ರೂಢಿಸಿಕೊಳ್ಳುವ ಮೂಲಕ ಕೂಡ್ಲು ಶ್ರೀ ಗೋಪಾಲಕೃಷ್ಣ ಭಜನಾ ಸಂಘವು ಆಸ್ತಿಕ ಶ್ರದ್ಧಾಳುಗಳಲ್ಲಿ ಧಾರ್ಮಿಕ ಜಾಗ್ರತಿ ಮೂಡಿಸುತ್ತಿರುವುದು ಸಂತೋಷದ ವಿಷಯ ಎಂದು ಅವರು ಹೇಳಿದರು.
ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್‍ನ್ನು ಕಾಸರಗೋಡಿಗೆ ಪರಿಚಯಿಸಿದ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ನಿರ್ದೇಶಕ ಕೆ.ವಾಮನ ರಾವ್ ಬೇಕಲ್ ಮತ್ತು ನಿರ್ದೇಶಕಿ ಕೆ.ಸಂಧ್ಯಾ ಕುಮಾರಿ ಟೀಚರ್ ಅವರು ತಾವು ಪ್ರಾಯೋಜಿಸಿದ ಸಮವಸ್ತ್ರವನ್ನು ಕೂಡ್ಲು ಶ್ರೀ ಗೋಪಾಲಕೃಷ್ಣ ಭಜನಾ ವಂಘದ ಸದಸ್ಯರಿಗೆ ವಿತರಿಸಿದರು. ಬಳಿಕ ಇದೇ ಸಂಘದವರಿಂದ ಕುಣಿತ ಭಜನೆ ಜರಗಿತು.
ಶಿವರಾಮ ಕಾಸರಗೋಡು ಹಾಗು ಭಜನಾ ಗುರುಗಳಾದ ಪ್ರವೀಣ್ ಕುಮಾರ್ ಕುಂದಾಪುರ ಮತ್ತು ವೀಣಾ ಪ್ರಸನ್ನ ಶ್ಯಾನುಭೋಗ್ ಅವರನ್ನು ಕನ್ನಡ ಭವನ ಗ್ರಂಥಾಲಯದ ಪರವಾಗಿ ಗೌರವಿಸಲಾಯಿತು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಶುಭಹಾರೈಸಿದರು. ಕೆ.ವಾಮನ ರಾವ್ ಬೇಕಲ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕನ್ನಡ ಜಾಗೃತಿ ಸಮಿತಿ ಕಾಸರಗೋಡು ಜಿಲ್ಲಾಧ್ಯಕ್ಷ ಸತ್ಯನಾರಾಯಣ ಕಾಸರಗೋಡು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.


