ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. `ಅಲ್ಲಿಂದ ಇಲ್ಲಿಯವರೆಗೂ' ಎನ್ನುವಾಗ ‘ಆ’ಕಾರ ಬದಲಾಗಬಾರದು
ಆಗರ್ಭ ಶ್ರೀಮಂತ : ಗರ್ಭದಲ್ಲಿದ್ದಾಗಿನ ಸ್ಥಿತಿಯಿಂದ ಇಲ್ಲಿಯವರೆಗೂ ಶ್ರೀಮಂತ.
ಆಮರಣ ಉಪವಾಸ : ಸಾಯುವವರೆಗೂ ನಿಲ್ಲಿಸದ ಉಪವಾಸ.
ಆಜೀವ ಸದಸ್ಯ : ಜೀವನವಿಡೀ ಸದಸ್ಯರಾಗಿರುವ.
ಆಜನ್ಮ ಬ್ರಹ್ಮಚರ್ಯ : ಜನ್ಮದಾರಂಭದಿಂದ ಅಂತ್ಯದವರೆಗೂ ಆಚರಿಸುವ ಬ್ರಹ್ಮಚರ್ಯ.
ಆಸೇತುಹಿಮಾಚಲ : ದಕ್ಷಿಣದಲ್ಲಿನ ರಾಮೇಶ್ವರ (ರಾಮಸೇತು ಇದೆಯೆನ್ನಲಾದ ಸ್ಥಳ)ದಿಂದ ಉತ್ತರದಲ್ಲಿನ ಹಿಮಾಲಯ ಪರ್ವತದವರೆಗೂ ಹಬ್ಬಿರುವ.
ಆಚಂದ್ರಾರ್ಕ : ಸೂರ್ಯ ಚಂದ್ರರಿರುವವರೆಗೂ (ಅರ್ಕ ಅಂದರೆ ಸೂರ್ಯ).
ಆಪಾದಮಸ್ತಕ : ಅಡಿಯಿಂದ ಮುಡಿಯವರೆಗೆ
ಆಜಾನುಬಾಹು : ನಿಂತಾಗ ಮೊಣಕಾಲುಗಳವರೆಗೆ ತಲುಪುವಷ್ಟು ಉದ್ದದ ಕೈಗಳುಳ್ಳ.
ಆಕರ್ಣಧನುರಾಸನ : ಯೋಗಾಸನದ ಒಂದು ಭಂಗಿ. ಕುಳಿತುಕೊಂಡು ಒಂದು ಕಾಲನ್ನು ಕೈಯಿಂದ ಹಿಡಿದು ಕಿವಿಯವರೆಗೂ ತಂದಾಗ ಬಿಲ್ಲಿಗೆ ಬಾಣ ಹೂಡಿರುವಂತೆ ಕಾಣುವುದು.
ಆಬಾಲವೃದ್ಧರಿಗೂ : ಮಕ್ಕಳಿಂದ ಮುದುಕರವರೆಗೂ.
ಇಂಗ್ಲಿಷ್‌ನಲ್ಲಾದರೆ right from... upto/until... throughout... ಮುಂತಾದುವನ್ನು ಬಳಸುವ ಸಂದರ್ಭಗಳಿವು. ಒಂಥರದಲ್ಲಿ boundary value ಹೇಳುವಂಥವು. ಈ ಎಲ್ಲ ಪದಪ್ರಯೋಗಗಳಲ್ಲಿ ಮೊದಲ ಸ್ವರಾಕ್ಷರ ‘ಆ’ ಇರಬೇಕು. ಅದನ್ನು ‘ಅ’ ಎಂದು ಬರೆಯುವುದು/ಉಚ್ಚರಿಸುವುದು ತಪ್ಪಾಗುತ್ತದೆ. ಮೊನ್ನೆ ಭಾನುವಾರದ ಹೊಸದಿಗಂತ ಸಾಪ್ತಾಹಿಕ ಪುರವಣಿಯಲ್ಲಿ `ಭರತನಾಟ್ಯಬೋಧಿನಿ’ ಎಂಬ ಮೌಲ್ಯಯುತ ಗ್ರಂಥವೊಂದರ ಪುಸ್ತಕವಿಮರ್ಶೆ ಪ್ರಕಟವಾಗಿತ್ತು. ಬರೆದವರು ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು. ಲೇಖನದ ಶೀರ್ಷಿಕೆ ‘ಅಬಾಲವೃದ್ಧರಿಗೂ ಆಪ್ಯಾಯಮಾನವಾಗಬಲ್ಲ ಕೃತಿ’ ಎಂದು ಇತ್ತು! ಕೊರ್ಗಿ ಉಪಾಧ್ಯಾಯರು ‘ಅಬಾಲವೃದ್ಧರಿಗೂ’ ಎಂದು ಬರೆದಿರಲಿಕ್ಕೆ ಸಾಧ್ಯವೇ ಇಲ್ಲ. ಅವರು ಪತ್ರಿಕೆಗೆ ಹಸ್ತಪ್ರತಿ ಕಳಿಸಿದ್ದರಲ್ಲಿ ‘ಆ’ ಅಕ್ಷರವು ‘ಅ’ದಂತೆ ತೋರುತ್ತಿದ್ದಿರಬಹುದು, ಪತ್ರಿಕೆಯವರು ಅದನ್ನು ಟೈಪ್ ಮಾಡುವಾಗ ‘ಅ’ ಎಂದೇ ಟೈಪ್ ಮಾಡಿರಬಹುದು. ಅಥವಾ, ಸರಿಯಾದ ಸಾಫ್ಟ್ ಕಾಪಿ ಕಳಿಸಿದ್ದರೂ ಮತ್ತೆ ಟೈಪ್ ಮಾಡಬೇಕಾಗಿ ಬಂದ ಭಾಗದಲ್ಲಿ ಈ ತಪ್ಪು ನುಸುಳಿದ್ದಿರಬಹುದು. ಪತ್ರಿಕೆಯವರಿಂದ ಆದದ್ದೇ ಹೌದಾದರೆ ಕೊರ್ಗಿಯವರಂಥ ವಿದ್ವಾಂಸರಿಗೆ ಅನಪೇಕ್ಷಿತ ಮುಜುಗರ.
===
೨. ಫೇಸ್‌ಬುಕ್‌ನ ಹೆಸರು ಫೇಸ್‌ಬುಕ್ ಎಂದೇ ಇರಬೇಕು
ಫೇಸ್‌ಬುಕ್ ಒಂದು ಕಂಪನಿಯ, ನೋಂದಣಿಗೊಂಡ ಹೆಸರು. ಬರವಣಿಗೆಯಲ್ಲಿ (ಬರಹ ಯಾವುದೇ ಭಾಷೆಯಲ್ಲಿದ್ದರೂ) ಕಂಪನಿಯ ಹೆಸರನ್ನು ಮೂಲ ಏನಿದೆಯೋ ಅದೇ ರೀತಿ ಬರೆಯಬೇಕು. FB ಎಂದು ಹ್ರಸ್ವಗೊಳಿಸುವುದನ್ನಾಗಲೀ, ಕನ್ನಡದಲ್ಲಿ ಬರೆಯುವಾಗ ‘ಮುಖಪುಸ್ತಕ’, ‘ವದನಪುಸ್ತಕ’ ‘ಮೊಗ ಹೊತ್ತಗೆ’, ‘ಮುಖಪುಟ’ ಅಂತೆಲ್ಲ ಅನುವಾದ ಮಾಡುವುದಾಗಲೀ ಸರಿಯಲ್ಲ. ಕನ್ನಡ ಅಕ್ಷರಗಳನ್ನೇ ಬಳಸಿದರೂ ‘ಫೇಸ್‌ಬುಕ್’ ಎಂದೇ ಬರೆಯಬೇಕು. ಇದು ಶಿಷ್ಟ(formal) ಬರವಣಿಗೆಯಲ್ಲಿ, ಅಂದರೆ ಒಂದು ಸಾಮಾನ್ಯ ಲೇಖನ, ಸುದ್ದಿ/ವರದಿ, ಪ್ರಬಂಧ, ಮಾಹಿತಿಯ ಪ್ರಕಟಣೆ ಮುಂತಾದ ಬರಹಗಳಲ್ಲಿ ಪಾಲಿಸಬೇಕಾದ ನಿಯಮ. ಹಾಗಂತ, ಫೇಸ್‌ಬುಕ್‌ನ ‘wall' ಗೆ ಸಮಾನಾರ್ಥಕ ಕನ್ನಡ ಪದ ‘ಗೋಡೆ’ ಎಂದು ಬಳಸಲಿಕ್ಕೆ ತೊಂದರೆಯೇನಿಲ್ಲ. ಉತ್ಪನ್ನ(product), ಸೇವೆ(service) ಇತ್ಯಾದಿಗಳ ನೋಂದಾಯಿತ ಹೆಸರುಗಳನ್ನು ಮಾತ್ರ ಯಥಾವತ್ತಾಗಿ ಬಳಸಬೇಕು. ಪದಶಃ ಅನುವಾದ ಮಾಡುವುದು ಸಲ್ಲದು. ಆಡುಮಾತಿನಲ್ಲಿ, informal chattingನಲ್ಲಿ, ಕವಿತೆಯಲ್ಲಿ ಅಥವಾ ಇನ್ನ್ಯಾವುದೋ ಅಣಕುಹಾಡಿನಲ್ಲಿ ಬೇಕಿದ್ರೆ ‘FB' ಅಂತಾದ್ರೂ ಹೇಳ್ಬೋದು, ಮುಖಪುಸ್ತಕ ಅಂತಾದ್ರೂ ಬರೀಬಹುದು, ಫೇಸ್ಬುಕ್ಕು ಅಂತಾದ್ರೂ ಗೀಚ್ಬೋದು ಯಾರೂ ಕೆಮ್ಮಂಗಿಲ್ಲ.
ಇಲ್ಲಿ ಫೇಸ್‌ಬುಕ್‌ಅನ್ನು ಪರಿಚಿತ ಉದಾಹರಣೆಯಾಗಿ ತೆಗೆದುಕೊಂಡಿರುವುದು. ಶಿಷ್ಟ ಬರವಣಿಗೆಯಲ್ಲಿ ಅಂಕಿತನಾಮಗಳೆಲ್ಲದಕ್ಕೂ ಈ ನಿಯಮ ಅನ್ವಯವಾಗುತ್ತದೆ ಎಂದು ನೆನಪಿಟ್ಟುಕೊಳ್ಳಬೇಕು.
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಆನಂದಬಾಷ್ಪ ಸರಿ. ಆನಂದಭಾಷ್ಪ ತಪ್ಪು.
ಆ) ಪುತ್ತಳಿ ಸರಿ (ಸಂಸ್ಕೃತದ ‘ಪುತ್ತಲ/ಪುತ್ತಲಿಕಾ’ಗಳಿಂದ ಬಂದದ್ದು). ಪುತ್ಥಳಿ ರೂಢಿಯಲ್ಲಿದೆ ಅಷ್ಟೇ.
ಇ) ವಿಪುಲ ಸರಿ (ಹೇರಳವಾದ, ಅತಿಶಯವಾದ). ವಿಫುಲ ತಪ್ಪು.
ಈ) ಸಾಕ್ಷ್ಯಚಿತ್ರ ಸರಿ. ಸಾಕ್ಷಚಿತ್ರ ತಪ್ಪು.
ಉ) ವಾಯವ್ಯ ಸರಿ. ವಾಯುವ್ಯ ತಪ್ಪು. `ವಾಯುವ್ಯ ದಿಕ್ಕಿನೆಡೆ ನೋಡು ಎಂದರು...’ ಎಂಬ ಸಾಲು ಕನ್ನಡದ ಯಾವ ಚಿತ್ರಗೀತೆಯಲ್ಲಿ ಬರುತ್ತದೆಯೆಂದು ನೆನಪಿಗೆ ಬಂದರೆ ತಿಳಿಸಿ.



