ಪುಸ್ತಕ: ಶಬರಿಮಲೆ ಸ್ವಾಮಿ ಅಯ್ಯಪ್ಪ
ಲೇಖಕರು: ಅಶ್ವಿನಿ ಕೋಡಿಬೈಲು
ಬರಹ: ಚೇತನಾ ಕುಂಬಳೆ
ಗ್ರಾಮೀಣ ಪ್ರತಿಭೆಯಾದ ಅಶ್ವಿನಿ ಕೋಡಿಬೈಲು ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದವರು. ಸೌಗಂಧಿಕ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಯಗೊಂಡ ಇವರ ಕವನಗಳು ರಾಜ್ಯಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿವೆ. ಜೀವನದ ಅನುಭವಗಳನ್ನೂ, ವಾಸ್ತವದೊಡನೆ ಒಂದಷ್ಟು ಕಲ್ಪನೆಗಳನ್ನೂ ಸೇರಿಸಿ ಬರೆಯುವ ಕವನಗಳು ಓದುಗರ ಮನವನ್ನು ಬಹಳ ಬೇಗ ತಲುಪಿಬಿಡುತ್ತವೆ. ಪ್ರೇಮಕವಿ ಕೆ ಎಸ್.ನ ಕಾವ್ಯ ಪುರಸ್ಕಾರ, 2018 ನೇ ಸಾಲಿನ ರಾಜ್ಯ ಮಟ್ಟದ ಕವಿಕಾವ್ಯ ಮೇಳದಲ್ಲಿ ಕಾವ್ಯಶ್ರೀ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಗೂ ಇವರು ಭಾಜನರಾಗಿದ್ದಾರೆ. ಕವನಗಳನ್ನೂ ಸಣ್ಣಕಥೆಗಳನ್ನೂ ಬರೆಯುತ್ತಿರುವ ಅಶ್ವಿನಿಯವರು ನೃತ್ಯರೂಪಕದಂಥ ಭಿನ್ನ ಪ್ರಕಾರದಲ್ಲಿ ಕೃತಿ ರಚನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಹೌದು ಇವರ ಎರಡನೇ ಕೃತಿ 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಒಂದು ನೃತ್ಯ ರೂಪಕ. ಅವರ ಮಗಳು ಅವನಿ ನೃತ್ಯ ಕಲಿಯುತ್ತಿದ್ದಾಳೆ. ನೃತ್ಯ ಶಿಕ್ಷಕಿ ಯೋಗೀಶ್ವರಿ ಜಯಪ್ರಕಾಶ್ ಅವರ ಕೋರಿಕೆಯ ಮೇರೆಗೆ ಈ ಕೃತಿ ರಚನೆಗೊಂಡಿದೆ. ಇಂತಹ ರೂಪಕಗಳನ್ನು ರಚಿಸುವ ಕಾರ್ಯ ಸುಲಭವೇನಲ್ಲ. ಅವರೇ ಹೇಳುವಂತೆ ಇದು ಸ್ವಾಮಿಯ ಅನುಗ್ರಹದ ಸೌಭಾಗ್ಯವೇ ಸರಿ. ಪುರಾಣ ಆಧಾರಿತ ಸ್ವಾಮಿ ಅಯ್ಯಪ್ಪನ ಕಥೆಯನ್ನು ಕೇಂದ್ರವಾಗಿರಿಸಿಕೊಂಡು ರಚನೆಗೊಂಡ ಈ ಕೃತಿ ಕನ್ನಡ ಸಾಹಿತ್ಯಕ್ಕೊಂದು ಹೊಸ ಪರಿಚಯ. ಇಲ್ಲಿವರೆಗೆ ನಾನು ನೃತ್ಯ ರೂಪಕಗಳನ್ನು ನೋಡಿರುವೆನೇ ಹೊರತು ಸಾಹಿತ್ಯ ಕೃತಿಯೊಂದನ್ನು ಇದೇ ಮೊದಲಸಲ ಓದಿದ್ದು. ಇಂತಹ ಕೃತಿ ರಚನೆಗೆ ಪುರಾಣದ ಅರಿವು ಇತಿಹಾಸದ ಪರಿಚಯ, ಅಧ್ಯಯನಶೀಲ ಮನಸ್ಸು ಬೇಕಾಗುತ್ತದೆ. ಅವೆಲ್ಲವೂ ಅಶ್ವಿನಿಯವರಲ್ಲಿದೆ ಎಂಬುದಕ್ಕೆ ಈ ಕೃತಿಯೇ ಸಾಕ್ಷಿ.
ಸುಳ್ಯದ ನಲಂದ ಪ್ರಕಾಶನದ ಮೂಲಕ ಪ್ರಕಟಗೊಂಡ ಈ ಕೃತಿಗೆ, ಕಿರಿಯರನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡುವುದರಲ್ಲಿ ತಮ್ಮ ಸಂತಸವನ್ನು ಕಾಣುವ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು ಮುನ್ನುಡಿ ಬರೆದಿದ್ದಾರೆ. ಇದರ ಆರಂಭದಲ್ಲಿಯೇ ಬ್ರಹ್ಮಶ್ರೀ ವಿ.ಎನ್ ವಾಸುದೇವನ್ ನಂಬೂದಿರಿ ಹಾಗೂ ಡಾ. ವೀರೇಂದ್ರ ಹೆಗಡೆಯವರ ಆಶೀರ್ವಾದದ ನುಡಿಗಳಿವೆ. ಜೊತೆಗೆ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಪ್ರೊ. ವಿ.ಬಿ ಅರ್ತಿಕಜೆಯವರ ಶುಭನುಡಿಗಳಿವೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಐತಪ್ಪ ನಾಯ್ಕ್ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ತದನಂತರದ ಪ್ರಸ್ತಾವನೆಯಲ್ಲಿ ಅಯ್ಯಪ್ಪ ಸ್ವಾಮಿಯ ಕಥೆಯನ್ನು ಸಂಕ್ಷಿಪ್ತವಾಗಿ ನೀಡುವುದರೊಂದಿಗೆ ಒಂದಷ್ಟು ಹೊಸ ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತದೆ. ಈ ರೂಪಕದಲ್ಲಿ ಒಟ್ಟು 10 ಅಂಕಗಳಿದ್ದು ಅವುಗಳ ಪರಿಚಯವನ್ನು ನೀಡಿದ ನಂತರ ಆದಿ ಪೂಜಿತ ಗಣೇಶ ಸ್ತುತಿ ಹಾಗೂ ಶ್ರೀ ಧರ್ಮಶಾಸ್ತಾ ಪಂಚರತ್ನ ಸ್ತೋತ್ರದೊಂದಿಗೆ ರೂಪಕವು ಆರಂಭವಾಗುತ್ತದೆ.
ಮೊದಲ ಮೂರು ಅಂಕಗಳಲ್ಲಿ, ಶಾಪಗ್ರಸ್ತ ಗಂಧರ್ವಳಾದ ಮಾಲಿನಿ ಮಹಿಷಿಯಾಗಿ ಹುಟ್ಟಿ, ಋಷಿಗಳಿಗೆ ಉಪಟಳವನ್ನು ನೀಡುವುದು, ಋಷಿಗಳಿಗೆ ವಿಷ್ಣು ಅಭಯ ನೀಡುವ ಸನ್ನಿವೇಶ ಹಾಗು ಭಸ್ಮಾಸುರನ ಹುಟ್ಟು ಸಾವಿನ ಮತ್ತು ಮಣಿಕಂಠನ ಜನನದ ವಿಚಾರಗಳನ್ನು ಮನೋ???ವಾಗಿ ಪದ್ಯ ಮತ್ತು ಗದ್ಯಗಳ ಮೂಲಕ ತಿಳಿಸುತ್ತಾರೆ. ಇಲ್ಲಿನ ಕಥೆಯನ್ನು ಸಹೃದಯ ಓದುಗರಿಗೆ ಓದಲು ಯೋಗ್ಯವಾಗುವಂಥ ಸರಳ ಸಂದರ ಭಾಷೆಯಲ್ಲಿ ಪದ್ಯಗಳನ್ನು ರಚಿಸಿದ್ದಾರೆ. ಅದೂ ಅಲ್ಲದೆ ಈ ಪದ್ಯಗಳು ಕಥನ ಕವನದ ಮಾದರಿಯನ್ನು ಹೊಂದಿರುವುದು ಗಮನಾರ್ಹ ವಿಷಯ. ನಾಲ್ಕನೇ ಅಂಕದಲ್ಲಿ ಪಂದಳ ದೇಶದ ವರ್ಣನೆಯಿದೆ ಹಾಗೆಯೇ,
ಏನಿದ್ದರೇನು ಅರಮನೆಯಲ್ಲಿ
ಕರುಳಿನ ಕುಡಿಯೊಂದು ಜನಿಸದಿರೆ
ಸಕಲೈಶ್ವರ್ಯವು ತೃಣಸಮ ನಮಗೆ ಸಂತಾನ ಭಾಗ್ಯವು ಇಲ್ಲದಿರೆ
ಎನ್ನುವಲ್ಲಿ, ಸುಖ ಸಂಭ್ರಮದ ನಡುವೆಯೂ ಸಂತಾನವಿಲ್ಲವೆಂಬ ದುಃಖ ರಾಜ ರಾಣಿಯರನ್ನು ಸಜೀವವಾಗಿ ದಹಿಸುತ್ತಿರುವ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ.
ಐದು ಮತ್ತು ಆರನೇ ಅಂಕಗಳಲ್ಲಿ ರಾಜ ಭೇಟೆಗೆ ಹೋಗುವ , ಕಾಡಿನ ಮಡಿಲಲ್ಲಿ ಸಿಕ್ಕಿದ ಅನಾಥ ಮಗುವನ್ನು ಅರಮನೆಗೆ ತಂದು ಪ್ರೀತಿಯಿಂದ ಸಾಕುವಲ್ಲಿ ಅವರೊಳಗಿನ ಕೊರಗು ನೀಗಿ ಸಂಭ್ರಮ ಮೂಡುವುದರೊಂದಿಗೆ ಈ ಅಂಕ ಕೊನೆಗೊಳ್ಳುತ್ತದೆ.
ಏಳನೇ ಮತ್ತು ಎಂಟನೇ ಅಂಕಗಳಲ್ಲಿ ಮಹಾರಾಣಿ ಗರ್ಭವತಿಯಾದಾಗ ರಾಜದಂಪತಿಯ ಸಂಭ್ರಮ, ಮಕ್ಕಳ ಬಾಲ್ಯದ ವಿನೋದಗಳ ಆಸ್ವಾದನೆಯಿದೆ. ಮಣಿಕಂಠನು ಯುವರಾಜನಾಗದಿರಲು ಮಂತ್ರಿಯ ನಡೆಸುವ ಕುತಂತ್ರ ಅದಕ್ಕೆ ಮಹಾರಾಣಿಯ ಉದರ ವೇದನೆಯ ನಾಟಕದ ಸನ್ನಿವೇಶ ಇಲ್ಲಿ ಚಿತ್ರಿತಗೊಂಡಿದೆ.
ಒಂಭತ್ತನೇ ಅಂಕದಲ್ಲಿ, ಮಣಿಕಂಠ ಹುಲಿಯ ಹಾಲಿಗಾಗಿ ಕಾಡಿಗೆ ಬಂದಾಗ ಮಹಿಷಿಯ ವಧೆಯಾಗುವುದರೊಂದಿಗೆ ಮಣಿಕಂಠನ ಜನನದ ಉದ್ದೇಶ ಈಡೇರುತ್ತದೆ.
ಹತ್ತನೇ ಅಂಕದಲ್ಲಿ, ಮಂತ್ರಿ ಹಾಗೂ ಮಹಾರಾಣಿಯ ಪಶ್ಚಾತ್ತಾಪ, ಅಯ್ಯಪ್ಪ ಸ್ವಾಮಿಯು ಶಬರಿಮಲೆಯಲ್ಲಿ ನೆಲೆಯಾಗುವ ಸಂಪೂರ್ಣ ಚಿತ್ರಣವಿದೆ.
"ಮೆಟ್ಟಿಲದು ಹದಿನೆಂಟು ದೇವರಾಲಯಕೆ
ತತ್ತಗಳು ಹದಿನೆಂಟು ಬದುಕಿನ ಯಶಕೆ
ಸುತ್ತಲಿನ ಮಲೆಗಳು ಹದಿನೆಂಟು ಇಲ್ಲಿ
ಭಕ್ತಿಯಿಂದ ನಮಿಸೋಣ ಒಕ್ಕೊರಲಿನಲಿ" ಎನ್ನುತ್ತಾ ಭಕ್ತಿ ಭಾವದಿಂದ ದೇವನನ್ನು ಸ್ಮರಿಸುತ್ತಾ, ಕಲಿಯುಗದ ಪ್ರತ್ಯಕ್ಷ ದೇವನಾದ ಅಯ್ಯಪ್ಪ ಸ್ವಾಮಿಯು ಎಲ್ಲರಿಗೂ ಮಂಗಳವನ್ನುಂಟು ಮಾಡಲೆಂಬ ಪ್ರಾರ್ಥನೆಯೊಂದಿಗೆ ಕೊನೆಯ ಭಾಗದಲ್ಲಿ ಹರಿಹರಸುತಾಷ್ಟಕಮ್ ನ್ನು ಉಲ್ಲೇಖಿಸುತ್ತಾರೆ
ಈ ರೂಪಕವು 2018ರ ದಶಂಬರ ತಿಂಗಳಲ್ಲಿ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರ ನಿರ್ದೇಶನದಲ್ಲಿ ನೀರ್ಚಾಲಿನ ಧರ್ಮಶಾಸ್ತಾ ಮಂದಿರದ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವದಂದು ಪ್ರಥಮ ಪ್ರದರ್ಶನವನ್ನೂ, ನಾರಂಪಾಡಿಯ ಅಯ್ಯಪ್ಪ ಮಂದಿರದಲ್ಲಿ ದ್ವಿತೀಯ ಪ್ರದರ್ಶನವನ್ನೂ ಬೆಳ್ಳಾರೆಯಲ್ಲಿ ತೃತೀಯ ಪ್ರದರ್ಶನದ ಮೂಲಕ ಈ ಕೃತಿ ಬಿಡುಗಡೆಗೊಂಡಿತು ಈಗಾಗಲೇ ಈ ರೂಪಕವು ಐದಾರು ಯಶಸ್ವೀ ಪ್ರದರ್ನಗಳನ್ನು ಕಂಡು ಅಪಾರ ಜನ ಮೆಚ್ಚುಗೆಯನ್ನು ಪಡೆದುಕೊಂಡಿರುವುದು ಖುಷಿಯ ವಿಚಾರ.
ಬರಹ: ಚೇತನಾ ಕುಂಬ್ಳೆ




