ಮಂಜೇಶ್ವರ: ಚಕ್ರವರ್ತಿ ಹೊಸಂಗಡಿ ಸಂಸ್ಥೆಯ 39ನೇ ವಾರ್ಷಿಕೋತ್ಸವ ಹೊಸಂಗಡಿ ಪೇಟೆಯಲ್ಲಿ ಇತ್ತೀಚೆಗೆ ನಡೆಯಿತು. ಮುಂದಿನ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಕರ್ನಾಟಕ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿರುವ ತುಳುನಾಡಿನ ಸಂಸ್ಕøತಿ ಸಂಸ್ಕಾರದ ಹಾಗೂ ಪ್ರೀತಿ ಮಮತೆಯನ್ನು ಪ್ರತಿಬಿಂಬಿಸುವ ಚಿತ್ರ `ಲುಂಗಿ' ಚಿತ್ರದ ನಾಯಕ ಹಾಗೂ ತಂಡದೊಂದಿಗೆ ಅದ್ದೂರಿಯ ಕಾರ್ಯಕ್ರಮ ಸಿನಿ ಸಂಭ್ರಮ -2019 ನಡೆಸುವ ಮೂಲಕ ನೆರೆದ ಜನತೆಗೆ ತಂಡವನ್ನು ಪರಿಚಯಿಸಿತು.
ಕಾರ್ಯಕ್ರಮದಲ್ಲಿ ಧಾರ್ಮಿಕ ಸಾಮಾಜಿಕ ಮುಂದಾಳು ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಶ್ರೀ ಗಣೋಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಇಂಚರ ಮೆಲೋಡಿಯಸ್‍ನ ಸ್ಥಾಪಕ ಕೇಶವ ಕನಿಲ, ಲುಂಗಿ ಚಲನಚಿತ್ರ ತಂಡದ ನಿರ್ಮಾಪಕ ಮುಖೇಶ್ ಹೆಗ್ಡೆ, ನಾಯಕ ನಟ ಪ್ರಸಾದ್ ಹೆಗ್ಡೆ, ಚಿತ್ರ ನಟರಾದ ಪ್ರಕಾಶ್ ತೂಮಿನಾಡು, ರೂಪಶ್ರೀ ವರ್ಕಾಡಿ, ನಿರ್ದೇಶಕರಾದ ಅರ್ಜುನ್, ರಕ್ಷಿತ್ ರೈ, ಅಕ್ಷಿತ್ ಶೆಟ್ಟಿ, ಸಹ ನಿರ್ಮಾಪಕರಾದ ಸುಲೋಚನಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಚಲನಚಿತ್ರದ ಬಗ್ಗೆ ವಿವರಿಸಿದರು. ಇವರಿಗೆ ಚಕ್ರವರ್ತಿ ಸಂಸ್ಥೆಯ ಸದಸ್ಯರು ಸ್ಮರಣಿಕೆ ನೀಡಿ ಗೌರವಿಸಿದರು.
ಬಳಿಕ ಅಂತಾರಾಷ್ಟ್ರೀಯ ಖ್ಯಾತ ಸೈಮಾ ಅವಾರ್ಡು ವಿಜೇತ ರಂಗನಟ ಪ್ರಕಾಶ್ ತೂಮಿನಾಡು ಅವರಿಗೆ ಚಕ್ರವರ್ತಿ ಹೊಸಂಗಡಿ ಸಂಸ್ಥೆಯ ವತಿಯಿಂದ ಕಲಾ ಚಕ್ರವರ್ತಿ ಬಿರುದನ್ನು ಹೊಸಂಗಡಿ ಜನತೆಯ ಸಮಕ್ಷಮದಲ್ಲಿ ಅತಿಥಿ ಗಣ್ಯರು ಪ್ರದಾನಗೈದರು. ಬಳಿಕ ರಿದಂ ಕಲ್ಚರಲ್ ವಿಂಗ್ಸ್ ಮಂಜೇಶ್ವರ ಹಾಗೂ ಇಂಚರ ಮೆಲೋಡಿಸ್ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.
ಚಕ್ರವರ್ತಿ ಸಂಸ್ಥೆಯ ಗೌರವಾಧ್ಯಕ್ಷ ಅನಿಲ್‍ರಾಜ್ ಅಂಗಡಿಪದವು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಧ್ಯಕ್ಷ ದಿನೇಶ್ ಅಂಗಡಿಪದವು, ಪ್ರಧಾನ ಕಾರ್ಯದರ್ಶಿ ಸತೀಶ್ ಕನಿಲ, ಕೋಶಾಧಿಕಾರಿ ಸುರೇಶ್ ಗಾಣಿಂಜಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಸಂಘಟಕ ಜಯ ಮಣಿಯಂಪಾರೆ ನಿರೂಪಿಸಿದರು. ಸಂಸ್ಥೆಯ ಕೋಶಾಧಿಕಾರಿ ಸುರೇಶ್ ಗಾಣಿಂಜಾಲ್ ವಂದಿಸಿದರು.


