ಕಾಸರಗೋಡು: ಮಂಜೇಶ್ವರ ಉಪಚುನಾವಣೆಗಾಗಿ ಮತಯಂತ್ರಗಳು ಜಿಲ್ಲಾಧಿಕಾರಿ ಕಚೇರಿಗೆ ತಲಪಿವೆ. 400 ವಿವಿಪಾಟ್, 400 ಕಂಟ್ರೋಲ್ ಯೂನಿಟ್, 400 ಬ್ಯಾಲೆಟ್ ಯೂನಿಟ್ ಗಳು ರವಾನೆಗೊಂಡಿವೆ. ಮತಯಂತ್ರಗಳ ಪ್ರಾಥಮಿಕ ತಪಾಸಣೆ ಇಂದು(ಸೆ.25) ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರ ಸಮಕ್ಷದಲ್ಲಿ ಈ ತಪಾಸಣೆ ಜರುಗಲಿದೆ. ಬೆಂಗಳೂರಿನ ಭೆಲ್ ಸಂಸ್ಥೆಯಿಂದ 7 ಮಂದಿಯ ಪರಿಣತರ ತಂಡದ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುವುದು. ಈ ಸಂಬಂಧ ಇತರ ಚಟಟುವಟಿಕೆಗಳಿಗಾಗಿ ಸುಮಾರು 25 ಮಂದಿ ಸಿಬ್ಬಂದಿಯ ನೇಮಕಾತಿ ನಡೆಸಲಾಗಿದೆ. ಎಂ.ತ್ರೀ. ಸೀರಿಯಲ್ ನಲ್ಲಿ ಸೇರಿದ ಅತ್ಯಾಧುನಿಕ ಮತಯಂತ್ರಗಳನ್ನು ಕೊಯಮತ್ತೂರಿನಿಂದ ರವಾನಿಸಲಾಗಿದೆ. ಮತಯಂತ್ರಗಳನ್ನು ಪೊಲೀಸ್ ನಿಗಾದಲ್ಲಿ ಭದ್ರವಾಗಿರಿಸಲಾಗಿದೆ.
ಇಂದು ಸಭೆ:
ಮಂಜೇಶ್ವರ ಉಪಚುನಾವಣೆ ಸಂಬಂಧ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಇಂದು(ಸೆ.25) ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸುವಂತೆ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಎರಡನೇ ದಿನವೂ ಯಾರೂ ನಾಮಪತ್ರಿಕೆ ಸಲ್ಲಿಸಿಲ್ಲ!:
ಮಂಜೇಶ್ವರ ಉಪಚುನಾವಣೆ ನಾಮಪತ್ರಿಕೆ ಸಲ್ಲಿಕೆಯ ಎರಡನೇ ದಿನವಾಗಿದ್ದ ನಿನ್ನೆ(ಸೆ.24) ಕೂಡ ಯಾವ ಅಭ್ಯರ್ಥಿಯೂ ನಾಮಪತ್ರಿಕೆ ಸಲ್ಲಿಸಿಲ್ಲ. ಸೆ.30 ವರೆಗೆ ನಾಮಪತ್ರಿಕೆ ಸಲ್ಲಿಸಬಹುದಾಗಿದೆ. ಚುನಾವಣೆ ಅಧಿಕಾರಿಯಾಗಿರುವ ಡೆಪ್ಯೂಟಿ ಕಲೆಕ್ಟರ್(ಎಲ್.ಆರ್.) ಎನ್.ಪ್ರೇಮಚಂದ್ರನ್ ಅವರ ಜಿಲ್ಲಾಧಿಕರಿ ಕಚೇರಿಯ ಆಫೀಸ್ ನಲ್ಲಿ, ಉಪಚುನಾವಣೆ ಅಧಿಕಾರಿಯಾಗಿರುವ ಮಂಜೇಶ್ವರ ಬ್ಲೋಕ್ ಅಭಿವೃದ್ಧಿ ಅಧಿಕಾರಿ ಎನ್.ಸುರೇಂದ್ರನ್ ಅವರ ಕಚೇರಿಯಲ್ಲೂ ನಾಮಪತ್ರಿಕೆ ಸಲ್ಲಿಸಬಹುದಾಗಿದೆ. ಚಟುವಟಿಕೆಗಳ ದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರಿಕೆ ಸಲ್ಲಿಸಬಹುದು.


