ಬದಿಯಡ್ಕ: ದೇಶವು ಕಂಡ ಶ್ರೇಷ್ಠ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಾತಃಸ್ಮರಣೀಯರು. ಹಸಿವು ಮುಕ್ತ, ದಾರಿದ್ರ್ಯ ಮುಕ್ತ, ಭಯಮುಕ್ತ ವಾತಾವರಣದ ಕನಸನ್ನು ಅವರು ಕಂಡಿದ್ದರು. ಅವರು ಬಿತ್ತಿದ ರಾಷ್ಟ್ರಭಕ್ತಿಯ ಬೀಜವು ಇಂದು ವಿಶ್ವದಲ್ಲಿಯೇ ಗುರುತಿಸುವ ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ ಹೇಳಿದರು.
ಅಟಲ್‍ಜೀ ಸೇವಾ ಸಂಘ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಇವರ ವತಿಯಿಂದ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಗುರುವಾರ ಜರಗಿದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಸುಶಾಸನ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ದೀಪಬೆಳಗಿಸಿ ಉದ್ಘಾಟಿಸಿದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾ ಜೊತೆಕಾರ್ಯದರ್ಶಿ ಅಶ್ವಿನಿ ಕೆ.ಎಂ., ಬಿಜೆಪಿ ಬದಿಯಡ್ಕ ಚುನಾವಣಾ ಸಮಿತಿ ಅಧ್ಯಕ್ಷ ಜಯರಾಮ ಚೆಟ್ಟಿಯಾರ್ ಬದಿಯಡ್ಕ ಮಾತನಾಡಿದರು. ಅಟಲ್‍ಜೀ ಸೇವಾ ಸಂಘ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ದಾಮೋದರ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ವಕೀಲ ಗಣೇಶ್ ಬಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಬಿ.ಕೆ. ವಂದಿಸಿದರು. ಟ್ರಸ್ಟ್‍ನ ವಿಜಯ ಸಾಯಿ ಬದಿಯಡ್ಕ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಬದಿಯಡ್ಕ ಗ್ರಾಮಪಂಚಾಯಿತಿ ಜನಪ್ರತಿನಿಧಿಗಳಾದ ಡಿ.ಶಂಕರ, ಹರೀಶ ಕಿಳಿಂಗಾರು, ಶ್ಯಾಮಪ್ರಸಾದ ಸರಳಿ, ಬಿಂದ್ಯಾ ಕಾರ್ತಿಕ್ ನೀರ್ಚಾಲು ಹಾಗೂ ಆಶ್ರಮದ ಹಿತೈಷಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.


