ಬದಿಯಡ್ಕ: ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಹೈಯರ್ ಸೆಕೆಂಡರಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್.)ವಾರ್ಷಿಕ ಶಿಬಿರ ಇಂದಿನಿಂದ ಜ.1ರ ವರೆಗೆ ಕಡಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೇಳದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
'ಇನ್ನೂ ಹರಿಯೋಣ ಮಾನವ ಸ್ನೇಹಕ್ಕಾಗಿ ಜೀವನಕ್ಕಾಗಿ' ಎಂಬ ಘೋಷ ವಾಕ್ಯದೊಂದಿಗೆ ಆಯೋಜನೆಗೊಂಡಿರುವ ಶಿಬಿರವನ್ನು ಇಂದು ಬೆಳಿಗ್ಗೆ 9.20ಕ್ಕೆ ಮಹಾಜನ ಹೈಯರ್ ಸೆಕೆಂಡರಿ ಪ್ರಾಂಶುಪಾಲ ಸುಬ್ರಹ್ಮಣ್ಯನ್ ಎಂ. ಹಾಗೂ ಕಡಂಬಳ ಶಾಲಾ ಮುಖ್ಯೋಪಾಧ್ಯಾಯಿನಿ ದೇವಕಿ ಬಿ.ಧ್ವಜಾರೋಹಣಗೈಯ್ದು ಚಾಲನೆ ನೀಡುವರು. ಬಳಿಕ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ.ನೂತನ ಸದಸ್ಯ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಮಹಾಜ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿರುವರು. ವಲಯ ಸಂಯೋಜಕ ಶ್ರೀನಾಥ್ ಇ.ಎನ್.ಎಸ್.ಎಸ್.ಸಂದೇಶ ವಾಚಿಸುವರು. ವಿವಿಧ ವಲಯಗಳ ಜನಪ್ರತಿನಿಧಿಗಳು, ಪ್ರಮುಖರು ಉಪಸ್ಥಿತರಿದ್ದು ಶುಭಹಾರೈಸುವರು. ಬಳಿಕ ವಿವಿಧ ತರಬೇತಿಗಳು, ಜಾಗೃತಿ ಚಟುವಟಿಕೆಗಳು, ಸೇವಾ ಚಟುವಟಿಕೆಗಳು ಮೊದಲಾದ ಕಾರ್ಯಕ್ರಮಗಳು ನಡೆದು ಜ.1 ರಂದು ಸಂಜೆ ಸಮಾರೋಪಗೊಳ್ಳಲಿದೆ.


