ನವದೆಹಲಿ: ಸರ್ಕಾರಿ ಸ್ವಾಮ್ಯದ 10 ಬ್ಯಾಂಕ್ ಗಳನ್ನು 4 ಬೃಹ ತ್ ಬ್ಯಾಂಕ್ ಗಳ ಜೊತೆ ವಿಲೀನಕ್ಕೆ ವಿರೋಧ ಸಹಿತ ಹಲವು ಬೇಡಿಕೆಗಳ ಈಡೇರಿಕೆಗಾಗಿ ಬ್ಯಾಂಕ್ ಯೂನಿಯನ್ ಕರೆ ನೀಡಿದ್ದ 2 ದಿನಗಳ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಕೇಂದ್ರದ ನಿರ್ಧಾರ ಖಂಡಿಸಿ ಬ್ಯಾಂಕ್ ಒಕ್ಕೂಟ ಸೆ.26, 27 ರಂದು ಮುಷ್ಕರ ನಡೆಸಲು ಮುಂದಾಗಿತ್ತು.
ಸೋಮವಾರ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಭರವಸೆ ನೀಡಿದ ಬೆನ್ನಲ್ಲೇ ಈ ಮುಷ್ಕರವನ್ನು ಕೈಬಿಡಲಾಗಿದೆ. ಇದಕ್ಕೂ ಮೊದಲು ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರುದ್ಧ ಬ್ಯಾಂಕಿಂಗ್ ಒಕ್ಕೂಟಗಳು ಆಕ್ರೋಶಗೊಂಡಿದ್ದವು. ಅಲ್ಲದೆ ವಾರದಲ್ಲಿ 5 ದಿನ ಕೆಲಸ, ವೇತನ ಪರಿಷ್ಕರಣೆ, ನಗದು ವ್ಯವಹಾರ ಸಮಯ ಕಡಿತ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಇದೇ 26 ಹಾಗೂ 27ರಂದು ಬ್ಯಾಂಕ್ ಮುಷ್ಕರ ನಡೆಸಲು ತೀರ್ಮಾನಿಸಲಾಗಿತ್ತು, ಇದಕ್ಕೂ ಮಣಿಯದಿದ್ರೆ ನವೆಂಬರ್ 2ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದವು.
ಈ ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಎ), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್‍ಬಿಒಸಿ) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ (ಎನ್‍ಒಬಿಒ) ಬೆಂಬಲ ನೀಡಿದ್ದವು.


