ತಿರುವನಂತಪುರ: ಕೇರಳದಲ್ಲಿ ಗುರುವಾರ ಕೋವಿಡ್-19ವೈರಸ್‍ನ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕರೊನಾ ವೈರಸ್ ಬಾಧಿತರ ಸಂಖ್ಯೆ 25ಕ್ಕೇರಿದೆ. ಕಾಸರಗೋಡು ನಿವಾಸಿಯೊಬ್ಬರಲ್ಲಿ ವೈರಸ್ ಖಚಿತಗೊಂಡಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆರಂಭದಲ್ಲಿ ವೈರಸ್ ಪತ್ತೆಯಾಗಿದ್ದ ಮೂರು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, ಇದೂ ಒಳಗೊಂಡಂತೆ ಒಟ್ಟು 28ಮಂದಿ ವೈರಸ್‍ಗೆ ತುತ್ತಾಗಿದ್ದರು.
ರಾಜ್ಯದಲ್ಲಿ ಒಟ್ಟು 31173ಮಂದಿಯ ಮೇಲೆ ನಿಗಾಯಿರಿಸಲಾಗಿದ್ದು, ಇವರಲ್ಲಿ 30936ಮಂದಿ ಅವರ ಮನೆಯಲ್ಲಿ ಹಾಗೂ 237ಮಂದಿಯನ್ನು ಆಸ್ಪತ್ರೆಯಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ಇಂದು ಹೊಸದಾಗಿ 64ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸದಾಗಿ 6103ಮಂದಿಯ ಮೇಲೆ ನಿಗಾಯಿರಿಸಲಾಗಿದ್ದು, 5155ಮಂದಿಯಲ್ಲಿ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಇವರನ್ನು ನಿಗಾದಿಂದ ಹೊರತುಪಡಿಸಲಾಗಿದೆ. 2921gಮಾದರಿಗಳನ್ನು ತಪಾಸಣೆಗಾಗಿ ಕಳುಹಿಸಲಾಗಿದ್ದು, 2342ರೋಗಬಾಧೆಯಿಲ್ಲ ಎಂದು ಖಚಿತಗೊಂಡಿದೆ.
ಕೊರೊನಾ ಬಾಧೆಯಿಂದ ರಾಜ್ಯದ ಆರ್ಥಿಕ ಸಥಿತಿ ಮತ್ತಷ್ಟು ಹದಗೆಡಲು ಕಾರಣವಾಗಿದೆ. ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಕೋವಿಡ್ 19 ಕಾರಣದಿಂದ ಇಕ್ಕಟ್ಟಿನಲ್ಲಿರುವ ಜನಸಾಮಾನ್ಯರ ಜೀವನಮಟ್ಟ ಸುಧಾರಣೆ ಹಾಗೂ ಹದಗೆಟ್ಟ ಆರ್ಥಿಕ ವಲಯದ ಪುನಶ್ಚೇತನಕ್ಕಾಗಿ 20ಸಾವಿರ ಕೋಟಿ ರೂ. ಮೊತ್ತದ ಆರ್ಥಿಕ ಪ್ಯಾಕೇಜ್ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.


