ಬದಿಯಡ್ಕ: ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ತುರ್ತು ಆದ್ಯತೆ ನೀಡದಿದ್ದಲ್ಲಿ ಜೀವ ಸಂಕುಲದ ಅಸ್ತಿತ್ವಕ್ಕೆ ಕುತ್ತು ಬಂದೊದಗಲಿದೆ. ಈ ನಿಟ್ಟಿನಲ್ಲಿ ಕ್ರಿಯಾತ್ಮಕ ಚಟುವಟಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸುವ ಹೊಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಜಿಲ್ಲಾ ಜಿಲ್ಲಾ ಜಲ ಮತ್ತು ಮಣ್ಣು ಸಂರಕ್ಷಣಾಧಿಕಾರಿ ಅಶೋಕ್ ಕುಮಾರ್ ಅವರು ಕರೆ ನೀಡಿದರು.
ವಿಶ್ವ ಜಲ ದಿನದ ಅಂಗವಾಗಿ ನೀರ್ಚಾಲು ಖಂಡಿಗೆ ಮದಕ ಪರಿಸರದಲ್ಲಿ ನಡೆದ ವಿಶೇಷ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾರಂಪರಿಕ ಜಲಮೂಲಗಳನ್ನು ಸಂರಕ್ಷಿಸುವುದರ ಜೊತೆಗೆ ಹೊಸತಾದ ಜಲ ಸಂರಕ್ಷಣೆಗಿರುವ ಮಾರ್ಗಗಗಳನ್ನು ಕಂಡುಕೊಳ್ಳಬೇಕು. ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂಬುದು ಹುಂಬ ವಾದವಾಗಿದ್ದು, ಪ್ರತಿಯೊಬ್ಬರ ಜವಾಬ್ದಾರಿಯುತ ಕೊಡುಗೆ ಈ ನಿಟ್ಟಿನಲ್ಲಿ ಲಭ್ಯವಾದಲ್ಲಿ ನೆಮ್ಮದಿಯ ಭವಿಷ್ಯತ್ತು ನಮ್ಮ ಹೊಸ ಪೀಳಿಗೆಯವರಿಗೆ ನೀಡಿದ ಕೃತಾರ್ಥತೆ ಸಾಕಾರವಾಗುವುದೆಂದು ಅವರು ತಿಳಿಸಿದರು.
ಪ್ರಗತಿಪರ ಕೃಷಿಕ ಶ್ರೀಕೃಷ್ಣ ಭಟ್ ಪುದುಕೋಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಸಂರಕ್ಷಣೆ ನಮ್ಮ ದೈನಂದಿನ ಜೀವನದ ಭಾಗವಾಗಬೇಕು. ನೀರು ಪೋಲಾಗುವುದನ್ನು ನಿಯಂತ್ರಿಸಿ ಸಕಾಲಕ್ಕೆ, ಸಮರ್ಥ ಮುನ್ನೆಚ್ಚರಿಕೆಗಳೊಂದಿಗೆ ನೀರನ್ನು ಬಳಸುವ ಜಾಗೃತಿ ನಮಗಿರಬೇಕು ಎಂದರು.
ಬದಿಯಡ್ಕ ಕೃಷಿ ಭವನದ ಅಧಿಕಾರಿ ಶೋಭಾ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ನಿವೃತ್ತ ಗ್ರಾಮಾಧಿಕಾರಿ ನಾರಾಯಣ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ನೀರ್ಚಾಲು-ಖಂಡಿಗೆ ಮದಕದ ಯೋಜನಾ ಸಂಚಾಲಕ ಎಂ.ಎಚ್.ಜನಾರ್ಧನ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.



