ನವದೆಹಲಿ: ವಿಮಾ ರಕ್ಷಣೆಯೊಂದಿಗೆ ಕೈಗೆಟುಕುವ ದರದ ವಸತಿ ಕಲ್ಪಿಸುವ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಪುನರಾರಂಭಿಸಲು ಇಂಡಿಯಾ ಇಂಕ್ ಸಲಹೆ ನೀಡಿದೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಕೇಂದ್ರ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದ್ದು, 2022ರ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾಗುತ್ತಿದ್ದು, 'ಎಲ್ಲರಿಗೂ ವಸತಿ' ಒದಗಿಸುವ ಗುರಿ ಹೊಂದಿದೆ.
ಕಡಿಮೆ ಆದಾಯದ, ಆರ್ಥಿಕವಾಗಿ ದುರ್ಬಲ ವರ್ಗ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ಸೇರಿದವರಿಗೆ ದೇಶದಾದಾದ್ಯಂತ ಎರಡು ಕೋಟಿ ಮನೆಗಳನ್ನು ಸಬ್ಸಿಡಿ ರೂಪದ ಸಾಲದ ಮೂಲಕ ನಿರ್ಮಿಸುವ ಉದ್ದೇಶದಿಂದ ಈ ವಸತಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಆದರೆ. ಈ ಯೋಜನೆಯಡಿ ಮಂಜೂರಾದ ಸಾಲಗಳು ವಿಮಾ ರಕ್ಷಣೆ ಹೊಂದಿರದ ಕಾರಣ ಸಾಲಗಾರ ಮೃತಪಟ್ಟರೆ ಅಥವಾ ಅಂಗವೈಕಲ್ಯದ ಅಪಾಯ ಎದುರಾದರೆ ಪರಿಹಾರ ಇರದಿದ್ದ ಕಾರಣಕ್ಕೆ ಯೋಜನೆ ಕುಂಠಿತವಾಗಿದೆ' ಎಂದು ಉದ್ಯಮ ಸಂಸ್ಥೆ ಸಿಐಐ ಹೇಳಿದೆ.


