ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಗ್ರಂಥಾಲಯ ದಿನವನ್ನು ಮಂಗಳವಾರ ಗ್ರಂಥಾಲಯದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಅಧ್ಯಾಪಕ ಶ್ರೀಧರ ಭಟ್ ಕುದಿಂಗಿಲ ಅವರು ಅಕ್ಷರ ದೀಪ ಬೆಳಗಿಸಿ ಮಾತನಾಡಿದರು. ಓದುವಿಕೆಯ ಮಹತ್ವ ಮತ್ತು ಗ್ರಂಥಾಲಯದ ಔಚಿತ್ಯದ ಕುರಿತು ವಿದ್ವತ್ಪೂರ್ಣ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಅತಿಹೆಚ್ಚು ಪುಸ್ತಕಗಳನ್ನೋದಿದ ವೈ.ವೆಂಕಟ್ರಮಣ ಭಟ್ ಬಾಂಡಿಲಮೂಲೆ ಅವರನ್ನು ಶಾಲು ಹೊದಿಸಿ ಪುಸ್ತಕವನ್ನಿತ್ತು ಗೌರವಿಸಲಾಯಿತು. ಅವರು ಕೃತಜ್ಞತೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ. ನರಸಿಂಹ ಭಟ್ ಗ್ರಂಥಾಲಯದ ಬಗ್ಗೆ ಸ್ವರಚಿತ ಮುಕ್ತಕವನ್ನು ವಾಚಿಸಿದರು.
ಕಾರ್ಯದರ್ಶಿ ಡಾ.ವೇಣುಗೋಪಾಲ್ ಕಳೆಯತ್ತೋಡಿ ಸ್ವಾಗತಿಸಿ, ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ವಂದಿಸಿದರು. ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಅಧ್ಯಕ್ಷರು ಗ್ರಂಥಾಲಯದ ಧ್ವಜಾರೋಹಣಗೈದು ದಿನಾಚರಣೆಗೆ ಚಾಲನೆ ನೀಡಿದರು.


