ಪೆರ್ಲ: ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ನಿವಾಸಿ ಜಬ್ಬಾರ್ ಎಂಬವರ ಮನೆಯ ತೆಂಗು ದಾಸ್ತಾನು ಕೊಠಡಿಯೊಳಗೆ ತೆಂಗಿನಕಾಯಿಗಳ ಮಧ್ಯೆ ಸಿಲುಕಿಕೊಂಡಿದ್ದ ಎರಡು ತಲೆ ಹಾವನ್ನು(whittaker's Boa) ಉರಗತಜ್ಞ, ವನ್ಯಜೀವಿ ಸಂರಕ್ಷಕ ಮುರಳೀಮಾಧವ ಪೆಲ್ತಾಜೆ ಅವರು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ತೆಂಗಿನಕಾಯಿಗಳಡಿ ಸಿಲುಕಿ ಹೊರಬರಲಾರದೆ ಚಡಪಡಿಸುತ್ತಿದ್ದ ಹಾವನ್ನು ಕಂಡ ಮನೆಯವರು ಭಯಭೀತರಾಗಿ ಮುರಳೀಮಾಧವ ಅವರಿಗೆ ಮಾಹಿತಿ ನೀಡಿದ್ದರು. ತೆಂಗಿನ ಕಾಯಿಗಳ ಮಧ್ಯೆ ಸಿಲುಕಿಕೊಂಡಿದ್ದ ಈ ಹಾವಿಗೆ ಒಂದಷ್ಟು ಗಾಯಗಳುಂಟಾಗಿದ್ದು, ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದುದನ್ನು ಮನಗಂಡು ಪೆರ್ಲದ ಸರ್ಕಾರಿ ಮೃಗಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದ ನಂತರ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಅಸ್ಪತ್ರೆ ವೈದ್ಯಾಧಿಕಾರಿ ಡಾ. ಬ್ರಿಜಿಟ್ ಕೆ.ಕೆ ಚಿಕಿತ್ಸೆ ನೀಡಿದರು.

