ಕಾಸರಗೋಡು: ಕೋಟ್ಟಾಯಂ ಜಿಲ್ಲೆಯ ಕೊಟ್ಟರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಕೊಲೆ ಪ್ರಕರಣ ಖಂಡಿಸಿ ಜಿಲ್ಲೆಯಲ್ಲಿ ವೈದ್ಯರ ಪ್ರತಿಭಟನೆ ಮುಂದುವರಿದಿದೆ. ಪ್ರಕರಣವೊಂದರ ಆರೋಪಿ, ಶಾಲಾ ಶಿಕ್ಷಕ ಇರಿದು ಕೊಲೆಗೈದ ಪ್ರಕರಣ ಖಂಡಿಸಿ ಕಾಸರಗೋಡು ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಮತ್ತು ಕೇರಳ ಗವರ್ನಮೆಂಟ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಶನ್(ಕೆಜಿಎಂಓಎ)ಸಹಯೋಗದಲ್ಲಿ ಮುಷ್ಕರ ನಡೆಯುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕಾಸರಗೋಡು ನಗರದ ವಿವಿಧೆಡೆ ಸಂಚರಿಸಿ ಆಸ್ಪತ್ರೆ ವಠಾರಕ್ಕೆ ವಾಪಸಾಗಿ ಸಂಪನ್ನಗೊಂಡಿತು. ಆಸ್ಪತ್ರೆಯಲ್ಲಿ ಓ.ಪಿ ಹಾಗೂ ವೈದ್ಯರ ಹೊರಗಿನ ಇತರ ಚಟುವಟಿಕೆಗಳು ಎರಡನೇ ದಿನವೂ ಸ್ಬ್ಧಗೊಂಡಿತ್ತು. ತುರ್ತು ವಿಭಾಗ ಹಾಗೂ ಒಳರೋಗಿಗಳಾಗಿ ಈಗಾಗಲೇ ದಾಖಲಾಗಿರವವರನ್ನು ಮಾತ್ರ ತಪಾಸಣೆ ನಡೆಸಿದರು. ವೈದ್ಯರ ಮುಷ್ಕರದಿಂದ ಕಾಸರಗೋಡು ಜನರಲ್ ಆಸ್ಪತ್ರೆ, ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲೂ ವೈದ್ಯರ ಸೇವೆ ಮೊಟಕುಗೊಂಡಿತ್ತು.

