ಕಾಸರಗೋಡು: ಮಳೆಗಾಲ ಪೂರ್ವಭಾವಿಯಾಗಿ ಸಿಪಿಎಂ ಆಶ್ರಯದಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಸ್ವಚ್ಛತಾ ಕಾರ್ಯದ ಜತೆಗೆ ಬೇಸಿಗೆ ಮಳೆ ಕಡಿಮೆಯಾಗಿರುವುದರಿಂದ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ವಿತರಣೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಪಕ್ಷ ಆಯೋಜಿಸಿರುವುದಾಗಿ ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿ ಬಾಲಕೃಷ್ಣನ್ ಮಾಸ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮಗ್ರ ಅಭಿಯಾನದಲ್ಲಿ ಎಲ್ಲಾ ಸಮುದಾಯದವರು, ಕ್ಲಬ್‍ಗಳು, ಗ್ರಂಥಾಲಯಗಳು, ವಿವಿಧ ಶಾಖೆಗಳ ನೇತೃತ್ವದಲ್ಲಿ ಸ್ವಚ್ಛತಾ ಚಟುವಟಿಕೆ ನಡೆಸಲಾಗುವುದು. ಕೆರೆಗಳು, ಬಾವಿಗಳು, ನದಿಗಳು ಮತ್ತು ಇತರ ನೀರಿನ ಮೂಲಗಳನ್ನು ಶುಚೀಕರಿಸಲಾಗುವುದು. 18 ಮತ್ತು 19ರಂದು ಶ್ರಮದಾನ ಆರಂಭಗೊಳ್ಳಲಿದೆ. 25ರಂದು ಸಿಪಿಎಂನ ಎಲ್ಲ ಶಾಖೆಗಳಲ್ಲಿ ಒಮ್ಮತದಿಂದ ಇಂತಹ ಕಾರ್ಯ ನಡೆಯಲಿದ್ದು, ಜೂನ್ 5 ರೊಳಗೆ ಎಲ್ಲಾ ಚಟುವಟಿಕೆಗಳು ಪೂರ್ಣಗೊಳ್ಳಲಿದೆ.
ಸಿಪಿಎಂನ ಸ್ಥಳೀಯ ಸಮಿತಿ ವ್ಯಾಪ್ತಿಯ ಯಾವುದೇ ನದಿಗಳು, ದೊಡ್ಡ ಕೊಳಗಳು ಮತ್ತು ಜಲಮೂಲಗಳನ್ನು ಸಂಘಟಿತರಾಗಿ ಸ್ವಚ್ಛಗೊಳಿಸಲಾಗುವುದು.
ಪ್ರತಿ ಬ್ಲಾಕಿನ ಆಸ್ಪತ್ರೆಗಳು, ಶಾಲೆಗಳು, ಇತರ ಸಂಸ್ಥೆಗಳು, ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣ ಮತ್ತು ಪ್ಲಾಟ್‍ಫಾರ್ಮ್ ಕಟ್ಟಡಗಳನ್ನು ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಗುವುದು.
ಸ್ವಯಂ ಸೇವಾ ಸಂಸ್ಥೆಗಳು, ಕುಟುಂಬಶ್ರೀ, ಕ್ಲಬ್‍ಗಳು, ವಾಚನಾಲಯಗಳು ಮುಂತಾದವುಗಳು ಕೈಗೊಳ್ಳುವ ಸ್ವಚ್ಛತಾ ಚಟುವಟಿಕೆಗಳಿಗೂ ಪಕ್ಷ ಬೆಂಬಲ ನೀಡಲಿದೆ. ಮೇ 19 ರಂದು ಇ.ಕೆ.ನಾಯನಾರ್ ಪುಣ್ಯತಿಥಿಯ ಅಂಗವಾಗಿ ಪ್ರಮುಖ ಪಟ್ಟಣಗಳು, ಕಚೇರಿಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ರಾಜ್ಯ ಸಮಿತಿ ಸದಸ್ಯರಿಂದ ಹಿಡಿದು ಪಕ್ಷದ ಸದಸ್ಯರು ಜಿಲ್ಲೆಯಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ. ತೃಕ್ಕರಿಪುರದಿಂದ ತೊಡಗಿ ಮಂಜೇಶ್ವರ ವರೆಗೆ ರಾಷ್ಟ್ರೀಯ ಹೆದ್ದಾರಿ ಶುಚೀಕರಣವೂ ನಡೆಯಲಿದೆ.
15 ರಂದು ಆಸ್ಪತ್ರೆಗಳು, ಸಾರ್ವಜನಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಸ್ವಚ್ಛತೆ ಮಾಡಲಾಗುವುದು. ಪರಿಸರ ದಿನವಾದ ಜೂನ್ 5 ರಂದು ಸಸಿ ನೆಡುವುದು ಸೇರಿದಂತೆ ವ್ಯಾಪಕ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

