ಜೈಪುರ: ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಪ್ರತಿಪಾದಿಸಿದ್ದಾರೆ. ಅಪರಾಧ ಎಸಗುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೆಹಲೋತ್ ಪೊಲೀಸರಿಗೆ ಸೂಚಿಸಿದ್ದಾರೆ.
0
samarasasudhi
ಆಗಸ್ಟ್ 09, 2023
ಜೈಪುರ: ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಪ್ರತಿಪಾದಿಸಿದ್ದಾರೆ. ಅಪರಾಧ ಎಸಗುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೆಹಲೋತ್ ಪೊಲೀಸರಿಗೆ ಸೂಚಿಸಿದ್ದಾರೆ.
ಭಿಲ್ವಾರದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಕುರಿತು ವಿಷಾದ ವ್ಯಕ್ತಪಡಿಸಿದ ಗೆಹಲೋತ್, ಪೊಲೀಸರು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದು, ಆರೋಪಿಗಳಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯನ್ನು ಕೊಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದರು. ಕೆಲವರು ಘಟನೆಗೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ, ಇದು ಸರಿಯಲ್ಲ ಎಂದು ಗೆಹಲೋತ್ ಆರೋಪಿಸಿದರು.
ಆಗಸ್ಟ್ 2ರಂದು ಭಿಲ್ವಾರ ಜಿಲ್ಲೆಯಲ್ಲಿ ದನ ಮೇಯಿಸಲು ಹೋಗಿದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಾಲಕಿಯನ್ನು ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಮಹಿಳೆ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ.
ತಮ್ಮ ಅಧಿಕೃತ ನಿವಾಸದಲ್ಲಿ ಕಾನೂನು ಸುವ್ಯವಸ್ಥೆ ಪರಿಶೀಲನಾ ಸಭೆ ನಡೆಸಿದ ಗೆಹಲೋತ್, ವಿಶೇಷ ಅಭಿಯಾನವೊಂದನ್ನು ಪ್ರಾರಂಭಿಸುವ ಮೂಲಕ ಅಪರಾಧ ಮನೋಭಾವ ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಗದಿತ ಸಮಯ ಮೀರಿ ತೆರೆದಿರುವ ಬಾರ್‌ಗಳು ಮತ್ತು ನೈಟ್‌ಕ್ಲಬ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ನಿರ್ದೇಶನ ನೀಡಿದ ಗೆಹಲೋತ್, ನಿಯಮಗಳನ್ನು ಉಲ್ಲಂಘಿಸಿದ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಗೃಹ ಖಾತೆ ರಾಜ್ಯ ಸಚಿವ ರಾಜೇಂದ್ರ ಯಾದವ್, ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ (ಗೃಹ) ಆನಂದ್ ಕುಮಾರ್, ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.