HEALTH TIPS

ರೈತ ಮುಖಂಡ ಡಲ್ಲೇವಾಲ್ ಉಪವಾಸ: ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಉಪವಾಸ ಕೈಗೊಂಡಿರುವ ರೈತ ಮುಖಂಡ ಜಗಜೀತ್ ಸಿಂಗ್ ಡಲ್ಲೇವಾಲ್ ಅವರ ಮನವೊಲಿಸಿ, ಆಸ್ಪತ್ರೆಗೆ ದಾಖಲಿಸಲು ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಡಿಸೆಂಬರ್ 31ರವರೆಗೆ ಸಮಯ ನೀಡಿದೆ.

ಡಲ್ಲೇವಾಲ್ ಅವರಿಗೆ ವೈದ್ಯಕೀಯ ನೆರವು ಒದಗಿಸಬೇಕು ಎಂದು ಈ ಹಿಂದೆ ನೀಡಿದ್ದ ಸೂಚನೆಯನ್ನು ಪಾಲಿಸದೆ ಇದ್ದುದಕ್ಕಾಗಿ, ಪರಿಸ್ಥಿತಿ ಬಿಗಡಾಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಸುಧಾಂಶು ಧುಲಿಯಾ ಅವರು ಇರುವ ರಜಾಕಾಲದ ವಿಭಾಗೀಯ ಪೀಠವು ‍ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಅಸಹಾಯಕತೆಯನ್ನು ವ್ಯಕ್ತಪಡಿಸಿದ ಪಂಜಾಬ್ ಸರ್ಕಾರವು, ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ರೈತರಿಂದ ಭಾರಿ ಪ್ರತಿರೋಧ ಎದುರಾಗುತ್ತಿದೆ ಎಂದು ತಿಳಿಸಿತು. ರೈತರು ಡಲ್ಲೇವಾಲ್ ಅವರನ್ನು ಸುತ್ತುವರಿದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಿಡುತ್ತಿಲ್ಲ ಎಂದು ಮಾಹಿತಿ ನೀಡಿತು.

ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ವೈದ್ಯರ ತಂಡವೊಂದು ಭೇಟಿ ನೀಡಿತ್ತು, ಡಲ್ಲೇವಾಲ್ ಅವರ ಮನವೊಲಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿತ್ತು ಎಂದು ಪಂಜಾಬ್‌ನ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ತಿಳಿಸಿದರು. ಆದರೆ ಯಾವುದೇ ವೈದ್ಯಕೀಯ ನೆರವು ಪಡೆಯಲು ಅವರು ನಿರಾಕರಿಸಿದ್ದಾರೆ ಎಂದು ಸಿಂಗ್ ಹೇಳಿದರು.

ಈ ವಿವರಣೆ ಕೇಳಿ ಅಸಮಾಧಾನ ವ್ಯಕ್ತಪಡಿಸಿದ ಪೀಠವು, ಪರಿಸ್ಥಿತಿಯನ್ನು ನಿಯಂತ್ರಿಸಲು ಪಂಜಾಬ್ ಸರ್ಕಾರ ಅಗತ್ಯ ಕೆಲಸ ಮಾಡುತ್ತಿಲ್ಲ ಎಂದು ಹೇಳಿತು. ಡಲ್ಲೇವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಅಡ್ಡಿ ಉಂಟುಮಾಡುತ್ತಿರುವ ರೈತ ಮುಖಂಡರು ಆತ್ಮಹತ್ಯೆಗೆ ಪ್ರಚೋದನೆ ನೀಡುವ ಕ್ರಿಮಿನಲ್ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿತು.

'ಅವರಿಗೆ ಡಲ್ಲೇವಾಲ್ ಅವರ ಜೀವದ ಬಗ್ಗೆ ಕಾಳಜಿ ಇದೇಯೇ ಅಥವಾ ಬೇರೆ ಯಾವುದಾದರೂ ವಿಷಯದ ಬಗ್ಗೆ ಕಾಳಜಿಯೇ? ನಾವು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಪಂಜಾಬ್ ಸರ್ಕಾರವು ನಮ್ಮ ನಿರ್ದೇಶನವನ್ನು ಪಾಲಿಸುತ್ತದೆ ಎಂದು ನಿರೀಕ್ಷಿಸುತ್ತೇವೆ' ಎಂದು ಪೀಠ ಹೇಳಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries