ಕೋಲ್ಕತ್ತ: ಭಾರತ-ಬಾಂಗ್ಲಾದೇಶ ಗಡಿಭಾಗದ ಬಳಿ ಶೋಧ ನಡೆಸಿದ ಭದ್ರತಾ ಸಿಬ್ಬಂದಿ ಭೂಗತ ಸಂಗ್ರಹಣಾ ಟ್ಯಾಂಕ್‌ಗಳ ಒಳಗಿದ್ದ ₹1.4 ಕೋಟಿ ಮೌಲ್ಯದ 'ಫೆನ್ಸೆಡಿಲ್' ಕೆಮ್ಮಿನ ಔಷಧ ತುಂಬಿದ್ದ 62,200 ಬಾಟಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಳಿವಿನ ಆಧಾರದಲ್ಲಿ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಮಜ್ದಿಯಾ ನಗರದಲ್ಲಿ ಗಡಿಭದ್ರತಾ ಪಡೆಯ ಸಿಬ್ಬಂದಿ ಶುಕ್ರವಾರ ಕಾರ್ಯಾಚರಣೆ ನಡೆಸಿದ್ದರು ಎಂದು ಪ್ಯಾರಾಮಿಲಿಟರಿ ಪಡೆ ಶನಿವಾರ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
'ಈ ದಾಳಿಯಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಅಕ್ರಮ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ' ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಗಿಡಮರಗಳಿದ್ದ ಪ್ರದೇಶದಲ್ಲಿ ಎರಡು ಟ್ಯಾಂಕ್‌ಗಳನ್ನು ನಿರ್ಮಿಸಲಾಗಿತ್ತು, ಇನ್ನೊಂದು ಟ್ಯಾಂಕ್ ಅನ್ನು ಸಿಜಿಐ ಶೀಟ್‌ನಿಂದ ಮಾಡಿರುವ ಗುಡಿಸಲಿನ ಅಡಿಯಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿದೆ.


