ಢಾಕಾ: ಬಾಂಗ್ಲಾದಲ್ಲಿ ಕಳೆದ ವರ್ಷ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ದೌರ್ಜನ್ಯ ಎಸಗಿದ ಆರೋಪವನ್ನು 1059 ನಿವೃತ್ತ ಪೊಲೀಸ್ ಸಿಬ್ಬಂದಿ ಎದುರಿಸುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 41 ಮಾಜಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಪ್ರಧಾನಿ ಶೇಕ್ ಹಸೀನಾ ಪದಚ್ಯುತಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಬಲಿಯಾದವರ ಕುಟುಂಬಸ್ಥರು ಮತ್ತು ಬದುಕುಳಿದವರು 1059 ಮಂದಿ ವಿರುದ್ಧ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ಪ್ರಧಾನ ಕಚೇರಿಯ ಅಧಿಕಾರಿಗಳು ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಇಬ್ಬರು ಮಾಜಿ ಪೊಲೀಸ್ ಮಹಾ ನಿರ್ದೇಶಕರು, ಢಾಕಾ ಮತ್ತು ಚಿತ್ತಗಾಂವ್‌ನ ಮಾಜಿ ಪೊಲೀಸ್ ಕಮಿಷನರ್‌ಗಳು ಸೇರಿದಂತೆ 41 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಮಾಜಿ ಹೆಚ್ಚುವರಿ ಪೊಲೀಸ್ ಕಮಿಷನರ್ ಹರುನೂರ್ ರಶೀದ್ ಅವರ ವಿರುದ್ಧ 174 ಪ್ರಕರಣಗಳು ದಾಖಲಾಗಿದ್ದು, ಅವರು ತಲೆಮೆರೆಸಿಕೊಂಡಿದ್ದಾರೆ.
ಹಲವು ಹಿರಿಯ ಅಧಿಕಾರಿಗಳು ತಲೆಮರೆಸಿಕೊಂಡಿದ್ದು, ಕೆಲವರು ದೇಶದಿಂದ ಪಲಾಯನ ಮಾಡಿರುವ ಸಾಧ್ಯತೆಗಳಿವೆ.
ಶೇಕ್ ಹಸೀನಾ ಸರ್ಕಾರದ ವಿರುದ್ಧ 2024ರಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಕಳೆದ ಜುಲೈನಿಂದ ಆಗಸ್ಟ್‌ವರೆಗೆ ಸುಮಾರು 1400 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಬಹುತೇಕರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದರು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಇತ್ತೀಚೆಗೆ ವರದಿ ಬಿಡುಗಡೆ ಮಾಡಿತ್ತು.

