ಕಾಸರಗೋಡು: ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಜಾತ್ಯತೀತತೆಯ ಆಧಾರದ ಮೇಲೆ ನ್ಯಾಯದ ತ್ವರಿತ ಅನುಷ್ಠಾನಕ್ಕೆ ನ್ಯಾಯಾಂಗವನ್ನು ಬಲಪಡಿಸುವುದು ಅತ್ಯಗತ್ಯ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಅವರು ಭಾನುವಾರ ಹೊಸದುರ್ಗ ನ್ಯಾಯಾಲಯದ ಪ್ಲಾಟಿನಂ ಮಹೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಮೊದಲ ಬಾರಿಗೆ ಕೊಲ್ಲಂ ಜಿಲ್ಲೆಯಲ್ಲಿ ಸುಪ್ರೀಂ ಕೋರ್ಟಿನ ಇ-ಕೋರ್ಟ್ ನೀತಿಯ ಅಂಗವಾಗಿ 24 ಗಂಟೆಗಳ ಕಾಲ ಚಟುವಟಿಕೆ ನಡೆಸುವ ಕಾಗದ ರಹಿತ ಡಿಜಿಟಲ್ ನ್ಯಾಯಾಲಯ ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಕಕ್ಷಿದಾರರು ಮತ್ತು ವಕೀಲರ ಉಪಸ್ಥಿತಿಯಿಲ್ಲದೆ ಪ್ರಕರಣವನ್ನು ಇತ್ಯರ್ಥಪಡಿಸಬಹುದು. ಹೊಸ ನ್ಯಾಯಾಲಯಗಳಲ್ಲದೆ, ಅದಕ್ಕೆ ಅನುಗುಣವಾಗಿ ಹುದ್ದೆಗಳನ್ನು ಸಹ ರಚಿಸಲಾಗಿದೆ, ಹೈಕೋರ್ಟ್‍ನಲ್ಲಿ 577 ಮತ್ತು ಅಧೀನ ನ್ಯಾಯಾಲಯಗಳಲ್ಲಿ 2334 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ವಕೀಲರ ಕಲ್ಯಾಣಕ್ಕಾಗಿ 1980 ರಲ್ಲಿ ಸ್ಥಾಪಿಸಲಾದ ಕಲ್ಯಾಣ ನಿಧಿಯಲ್ಲಿ 30000 ರೂ. ಮೊತ್ತವನ್ನು 2016ರ ವೇಳೆಗೆ ನಿವೃತ್ತಿಯಾಗುವಾಗ 10 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ವೈದ್ಯಕೀಯ ನೆರವಿನ ಮೊತ್ತವನ್ನು 5000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಈ ಸಂದರ್ಭ ವಕೀಲ ವೃತ್ತಿಯಲ್ಲಿ 50ವರ್ಷ ಪೂರ್ಯಸಿದ ಸಿ.ಕೆ.ಶ್ರೀಧರನ್, ಯು.ಬಿ.ಮುಹಮ್ಮದ್, ಎಂ.ಸಿ.ಜೋಸ್, ಟಿ.ಎಂ.ಮ್ಯಾಥ್ಯೂ, ಎ.ವಿ.ಜಯಚಂದ್ರನ್, ಪಿ. ಅಪ್ಪುಕುಟ್ಟನ್ ಮೊದಲಾದವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಪ್ಲಾಟಿನಂ ಮಹೋತ್ಸವದ ಅಂಗವಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ರಾಜಮೋಹನ್ ಉನ್ನಿತಾನ್ ಬಿಡುಗಡೆಗೊಳಿಸಿದರು. ಶಾಸಕರಾದ ಎಂ.ರಾಜಗೋಪಾಲನ್, ಚಿ. ಕುಂಞಂಬು ಶಾಸಕ, ಕಾಸರಗೋಡು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಾನು ಎಸ್ ಪಣಿಕ್ಕರ್, ಹೊಸದುರ್ಗ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯನ್ಯಾಯಾಧೀಶ ಪಿ.ಎಂ.ಸುರೇಶ್, ಕಾಸರಗೋಡು ಮುಖ್ಯ ನ್ಯಾಯಿಕ ದಂಡಾಧಿಕಾರಿ ರಾಜೀವ್ ವಾಚಾಲ್, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತ, ಕಾಸರಗೋಡು ವಕೀಲರ ಸಂಘದ ಅಧ್ಯಕ್ಷ ಕೆ.ಮಣಿಕಂಠನ್ ನಂಬಿಯಾರ್, ಹಿರಿಯ ವಕೀಲ ಸಿ.ಕೆ. ಶ್ರೀಧರನ್ ಮೊದಲಾದವರು ಉಪಸ್ಥಿತರಿದ್ದರು.




