ಮುಂಬಯಿನಲ್ಲಿ ಉಗ್ರ ದಾಳಿ ಕೈಗೊಳ್ಳುವ 1 ವಾರದ ಮುನ್ನ ಭಾರತಕ್ಕೆ ಬಂದಿದ್ದ ತಹಾವ್ವುರ್ ರಾಣಾ, ಇದಾದ ಬಳಿಕ ದುಬಾೖಗೆ ಪ್ರಯಾ ಣಿಸಿ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಿದ್ದ. ಈತನಿಗೆ ಮುಂಬಯಿಯಲ್ಲಿ ದಾಳಿ ನಡೆಸುವ ಬಗ್ಗೆ ತಿಳಿಸಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ಹೇಳಿರುವುದಾಗಿ ಮೂಲ ಗಳು ತಿಳಿಸಿವೆ. ದುಬಾೖಯಲ್ಲಿ ರಾಣಾನನ್ನು ಭೇಟಿ ಮಾಡಿದ ವ್ಯಕ್ತಿ ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈತ ಐಎಸ್‌ಐ ಅಥವಾ ಭಯೋತ್ಪಾದನ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದು, ರಾಣಾನಿಗೆ ಸಹಾಯ ಮಾಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.
ಜನಪ್ರಿಯನಾಗಲು ಬಯಸುವ ವಕೀಲ ಬೇಡ: ರಾಣಾ
ಪ್ರಸ್ತುತ ಎನ್‌ಐಎ ವಶದಲ್ಲಿರುವ ಉಗ್ರ ತಹಾವ್ವುರ್ ರಾಣಾ ದಿಲ್ಲಿ ಕೋರ್ಟ್ ಎದುರು ಹಾಜರಾಗಿದ್ದು, ಈ ವೇಳೆ ತನಗೆ ಯಾವುದೇ ವಕೀಲರ ಆವಶ್ಯಕತೆ ಇಲ್ಲ ಎಂದು ಹೇಳಿದ್ದಾನೆ. ಅಲ್ಲದೇ ಕೆಲವು ವಸ್ತುಗಳಿಗೆ ಬೇಡಿಕೆ ಸಲ್ಲಿಸಿದ್ದು, ಬರೆಯುವ ಪ್ಯಾಡ್ ಮತ್ತು ಪೆನ್ ನೀಡಲು ಕೋರ್ಟ್ ಅನುಮತಿ ನೀಡಿದೆ. ಅಲ್ಲದೇ ರಾಣಾನನ್ನು 18 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿದೆ.
ಸೇನೆ ಬಿಟ್ಟರೂ ಸಮವಸ್ತ್ರ ಬಿಡದ ಉಗ್ರ ರಾಣಾ
ಪಾಕಿಸ್ಥಾನದ ಸೇನೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ರಾಣಾ, ಸೇನೆ ತೊರೆದ ಬಳಿಕವೂ ಸೇನಾಧಿಕಾರಿಗಳು ಮತ್ತು ಲಷ್ಕರ್ ಉಗ್ರರ ಜತೆ ಸಭೆ ನಡೆಸುವಾಗ ಸೇನೆಯ ಸಮವಸ್ತ್ರ ಧರಿಸುತ್ತಿದ್ದ ಎಂದು ವರದಿಗಳು ತಿಳಿಸಿವೆ. ರಾಣಾ ವೈದ್ಯನಾದ ಬಳಿಕ ಸೇನೆಯಲ್ಲಿ ಕೆಲಸ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದ. ಸೇನೆ ತೊರೆದ ಬಳಿಕ ಹಲವು ಬಾರಿ ಭಯೋತ್ಪಾದಕ ಸಂಘಟನೆಗಳನ್ನು ಭೇಟಿ ಮಾಡಲು ರಾಣ ತೆರಳಿದ್ದು, ಆಗೆಲ್ಲ ಸೇನಾ ಸಮವಸ್ತ್ರ ಧರಿಸಿಯೇ ತೆರಳುತ್ತಿದ್ದ ಎಂದು ವರದಿಗಳು ತಿಳಿಸಿವೆ.

