ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆ - 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಸಿರುವ 13 ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ನಿಭಾಯಿಸಲು ಕಷ್ಟವಾಗುವ ಕಾರಣಕ್ಕೆ ಹೊಸದಾಗಿ ಅರ್ಜಿಗಳನ್ನು ಪರಿಗಣಿಸಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
'ಅರ್ಜಿಗಳ ಸಂಖ್ಯೆಯನ್ನು ನಾವು ಈಗ ಹೆಚ್ಚುಮಾಡುವುದಿಲ್ಲ...' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ಆದರೆ ಹೆಚ್ಚುವರಿ ಕಾರಣಗಳನ್ನು ಉಲ್ಲೇಖಿಸಿ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸುವುದಿದ್ದರೆ, ಮುಖ್ಯ ಅರ್ಜಿಗಳ ಜೊತೆಗೇ ಅರ್ಜಿ ಸಲ್ಲಿಸುವಂತೆ ಪೀಠವು ಫಿರೋಜ್ ಇಕ್ಬಾಲ್ ಖಾನ್, ಇಮ್ರಾನ್ ಪ್ರತಾಪಗಢಿ ಶೇಖ್ ಮುನೀರ್ ಅಹಮದ್ ಮತ್ತು ಮುಸ್ಲಿಂ ವಕೀಲರ ಸಂಘಕ್ಕೆ ಸೂಚಿಸಿದೆ.

