HEALTH TIPS

ಟ್ರಂಪ್ ಪ್ರತಿಸುಂಕ: ಯುರೋಪ್ ಮೇಲಿನ ಅಮೆರಿಕ ಒತ್ತಡ ತಗ್ಗಿಸಲು ಮೆಲೊನಿ ಮಧ್ಯಸ್ಥಿಕೆ

 ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿಗೆ ವಿಶೇಷ ಔತಣ ಕೂಟ ಆಯೋಜಿಸಿದ್ದಾರೆ. ಅಮೆರಿಕದ ಪ್ರತಿಸುಂಕದ ಬರೆಯಿಂದ ಪಾರಾಗಲು ಮೆಲೊನಿ ಅವರು ವಾಷಿಂಗ್ಟನ್‌ ಮತ್ತು ಯುರೋಪ್‌ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದ್ದಾರೆ ಎಂದೆನ್ನಲಾಗಿದೆ.

27 ರಾಷ್ಟ್ರಗಳನ್ನೊಳಗೊಂಡ ಐರೋಪ್ಯ ಒಕ್ಕೂಟದ ಮೇಲೆ ಅಮೆರಿಕವು ಶೇ 25ರಷ್ಟು ಆಮದು ಸುಂಕ ಹೇರಿದೆ. ಇದರಲ್ಲಿ ಪ್ರಮುಖವಾಗಿ ಉಕ್ಕು, ಅಲ್ಯುಮಿನಿಯಂ ಮತ್ತು ಕಾರುಗಳು ಸೇರಿವೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಉತ್ಪನ್ನಗಳ ಮೇಲೆ ಯುರೋಪ್‌ನಲ್ಲೂ ಸುಂಕ ಹೆಚ್ಚಳ ಮಾಡಲಾಗಿದೆ. ಇದರಿಂದ ಎರಡೂ ಕಡೆ ಒತ್ತಡ ಸೃಷ್ಟಿಯಾಗಿದೆ.


ಈ ನಡುವೆ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಯುರೋಪಿಯನ್‌ ಒಕ್ಕೂಟದಲ್ಲೆ ಮೆಲೊನಿಗೆ ಮಾತ್ರ ಟ್ರಂಪ್ ಆಹ್ವಾನಿಸಿದ್ದರು. ಸದ್ಯ ಸುಂಕಕ್ಕೆ 90 ದಿನಗಳ ವಿರಾಮವನ್ನು ಅಮೆರಿಕ ನೀಡಿದೆ. ಇದರಿಂದ ಮೆಲೊನಿ ಮೇಲಿನ ಒತ್ತಡ ಒಂದಷ್ಟು ತಗ್ಗಿದೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವೇನ್ಸ್ ಅವರು ಶುಕ್ರವಾರ ರೋಮ್‌ಗೆ ಭೇಟಿ ನೀಡುತ್ತಿದ್ದು, ಅದಕ್ಕೂ ಒಂದು ದಿನ ಮುಂಚೆ ಅಮೆರಿಕವು ಮೆಲೊನಿಗೆ ಔತಣ ಕೂಟ ಆಯೋಜಿಸಿದೆ. ಗುರುವಾರ ಟ್ರಂಪ್‌ ಜತೆ ಮಾತುಕತೆ, ಶುಕ್ರವಾರ ವೇನ್ಸ್‌ ಜತೆ ಮಾತುಕತೆ ನಡೆಸುವ ಮೂಲಕ ಅಮೆರಿಕ ಮತ್ತು ಯುರೋಪ್ ನಡುವೆ ಉಂಟಾಗಿರುವ ವ್ಯಾಪಾರ ವಿರಸವನ್ನು ತಗ್ಗಿಸುವರೇ ಎಂದು ಕಾದು ನೋಡಬೇಕು.

ಗುರುವಾರ ದಿನವಿಡೀ ವಾಷಿಂಗ್ಟನ್‌ನಲ್ಲಿ ಮೆಲೊನಿ ಕಳೆಯಲಿದ್ದಾರೆ. ಶ್ವೇತ ಭವನ ಬಳಿಯೇ ಇರುವ ಬ್ಲೇರ್‌ ಹೌಸ್‌ ಅತಿಥಿಗೃಹದಲ್ಲಿ ತಂಗಲಿದ್ದಾರೆ. ಟ್ರಂಪ್‌ ತೆರಿಗೆ ನೀತಿ ವಿರೋಧಿಸಿದ್ದ ಐರೋಪ್ಯ ಒಕ್ಕೂಟವನ್ನು ಅಮೆರಿಕದ ಪ್ರತಿಸುಂಕದಿಂದ ಹೊರಗಿಡುವುದು, ಉಕ್ರೇನ್ ಯುದ್ಧ ಕೊನೆಗಾಣಿಸಲು ರಷ್ಯಾದೊಂದಿಗೆ ಮಾತುಕತೆ ಸೇರಿದಂತೆ ಜಾರ್ಜಿಯಾ ಮೆಲೊನಿ ಅವರು ತನ್ನ ಸಿದ್ಧಾಂತ ಮತ್ತು ಟ್ರಂಪ್ ಹಾಗೂ ಐರೋಪ್ಯ ಒಕ್ಕೂಟದೊಂದಿಗಿನ ಸಂಬಂಧ ಕಾಪಾಡುವ ಗುರುತರ ಜವಾಬ್ದಾರಿಯೊಂದಿಗೆ ಹಗ್ಗದ ಮೇಲಿನ ನಡಿಗೆ ನಡೆಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇಟಲಿಯ ರಫ್ತು ಆಧಾರಿತ ಆರ್ಥಿಕತೆ ರಕ್ಷಣೆಯ ಒತ್ತಡದಲ್ಲಿ ಮೆಲೊನಿ ಇದ್ದಾರೆ. ಕಳೆದ ವರ್ಷ 45 ಶತಕೋಟಿ ಅಮೆರಿಕನ್ ಡಾಲರ್‌ ವಹಿವಾಟನ್ನು ಇಟಲಿ ನಡೆಸಿತ್ತು. ಇದರ ಜತೆಯಲ್ಲಿ ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ಹಿತವನ್ನೂ ಕಾಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಅಮೆರಿಕದ ಆಹ್ವಾನಿ ಸ್ವೀಕರಿಸಿ ಒಬ್ಬರೇ ಹೋಗುತ್ತಿರುವ ಮೆಲೊನಿ ಐರೋಪ್ಯ ಒಕ್ಕೂಟದಲ್ಲಿ ಬಿರುಕು ಮೂಡಿಸಬಹುದು ಎಂದು ಫ್ರಾನ್ಸ್ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ವ್ಯಾಪಾರ ವಹಿವಾಟಿನ ಒಪ್ಪಂದದ ಹೊಣೆಗಾರಿಕೆಯೊಂದಿಗೆ ಪ್ರವಾಸ ಕೈಗೊಂಡಿರುವುದನ್ನು ಯುರೋಪಿಯನ್ ಕಮಿಷನ್‌ ಸ್ವಾಗತಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries