ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ. ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಶೀಘ್ರವೇ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ವಿವಾದಿತ ಗಣಿ ಕಂಪನಿ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ಸ್ ಲಿಮಿಟೆಡ್ (ಸಿಎಂಆರ್‌ಎಲ್) ಹಾಗೂ ವೀಣಾ ಟಿ.ಅವರ ಬೆಂಗಳೂರು ಮೂಲದ ಐಟಿ ಸಂಸ್ಥೆ ಎಕ್ಸ್‌ಲಾಜಿಕ್ ಸಲ್ಯೂಷನ್ ನಡುವೆ ನಡೆದಿದೆ ಎನ್ನಲಾದ ₹2.70 ಕೋಟಿ ಪಾವತಿ ಹಗರಣಕ್ಕೆ ಸಂಬಂಧಿಸಿ ಇ.ಡಿ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.
ಇದೇ ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದಷ್ಟೇ ವೀಣಾ ಅವರ ವಿರುದ್ಧ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಆರೋಪ ಪಟ್ಟಿ ಸಲ್ಲಿಸಿತ್ತು.ಇದರ ಬೆನ್ನಲ್ಲೇ ಇದೀಗ ಇ.ಡಿ ಕೂಡ ಎಸ್‌ಎಫ್‌ಐಒನಿಂದ ಅಗತ್ಯ ಮಾಹಿತಿ ಪಡೆದಿದೆ ಎನ್ನಲಾಗಿದೆ.
ವೀಣಾ ಅವರ ವಿರುದ್ಧ ಕ್ರಮಕೈಗೊಳ್ಳಲು ಕೋರಿ ಇ.ಡಿ ಮುಂದೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಈಗಾಗಲೇ ಪ್ರಾಥಮಿಕ ತನಿಖೆಯನ್ನೂ ಇ.ಡಿ ನಡೆಸಿದೆ.
'ಎಸ್‌ಎಫ್‌ಐಒ ಕ್ರಮದ ಹಿಂದಿನ ಉದ್ದೇಶವು ನನ್ನನ್ನು ಗುರಿಯಾಗಿಸುವುದಾಗಿದೆ. ನಿಮಗೆ ನನ್ನ ರಕ್ತ ಬೇಕು ಎಂಬುದು ನನಗೆ ಗೊತ್ತಿದೆ. ಆದರೆ, ನೀವು ಅದನ್ನು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ವಿಷಯದ ಬಗ್ಗೆ ಸರಣಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ನೀವು ನನ್ನ ರಾಜೀನಾಮೆಯನ್ನು ನಿರೀಕ್ಷಿಸಬಹುದು. ಎಸ್‌ಎಫ್‌ಐಒ ಪ್ರಕರಣವು ನ್ಯಾಯಾಲಯದಲ್ಲಿದೆ. ಅದನ್ನು ಕಾನೂನಾತ್ಮಕವಾಗಿಯೇ ನಿಭಾಯಿಸಲಾಗುವುದು' ಎಂದು ಹೇಳಿದರು.
ಖಾಸಗಿ ಗಣಿಗಾರಿಕೆ ಕಂಪನಿ ಸಿಎಂಆರ್‌ಎಲ್‌ನಿಂದ ತಮ್ಮ ಮಗಳ ಐ.ಟಿ ಸಂಸ್ಥೆಯು ಸ್ವೀಕರಿಸಿದ ಮೊತ್ತದ ಮೇಲೆ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿಸಿರುವ ವಾಸ್ತವಾಂಶಗಳನ್ನು ಮಾಧ್ಯಮಗಳು ನಿರ್ಲಕ್ಷಿಸುತ್ತಿವೆ ಎಂದು ವಿಜಯನ್ ದೂರಿದರು.


