ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಯ ಬಳಿಕ ದೇಶದ ವಿವಿಧೆಡೆ ಕಾಶ್ಮೀರಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಈ ವಿಷಯದ ಕುರಿತು ಇತರ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದ್ದಾರೆ.
'ಕಾಶ್ಮೀರಿ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿರುವ ಕುರಿತು ಯಾವ ರಾಜ್ಯಗಳಿಂದ ವರದಿಗಳು ಬಂದಿವೆಯೋ, ಅಲ್ಲಿನ ಮುಖ್ಯಮಂತ್ರಿಗಳ ಜತೆ ನಾನು ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ತೋರುವಂತೆ ಕೋರಿದ್ದೇನೆ' ಎಂದು ಅಬ್ದುಲ್ಲಾ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಹಾಯವಾಣಿ: ದೆಹಲಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ರೆಸಿಡೆಂಟ್ ಕಮಿಷನ್ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದ್ದು, ಅದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ತೊಂದರೆಗೆ ಸಿಲುಕಿರುವ ಕಾಶ್ಮೀರಿಗಳು ಸಹಾಯವಾಣಿ ಸಂಖ್ಯೆಗಳಾದ 7303620090, 9682389265, 9419158581, 01124611108, 01124615475, 01124611157, 01126112021 and 01126112022 ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರಕಟಣೆ ತಿಳಿಸಿದೆ.
ದೇಶದ ವಿವಿಧೆಡೆ ಕಾಶ್ಮೀರಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ಬಿತ್ತರವಾದ ಬೆನ್ನಲ್ಲೇ, ಅಬ್ದುಲ್ಲಾ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

