ಚೆನ್ನೈ: ಪ್ರಸಕ್ತ ಸಾಲಿನ ಸಂತಾನೋತ್ಪತ್ತಿ ಅವಧಿಯಲ್ಲಿ ಆಲಿವ್ ರಿಡ್ಲಿ ಆಮೆಗಳು ತಮಿಳುನಾಡಿನಲ್ಲಿ 2.29 ಲಕ್ಷ ಮರಿಗಳಿಗೆ ಜನ್ಮನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿವೆ.
2019-20ನೇ ಸಾಲಿಗೆ ಹೋಲಿಸಿದರೆ, 2024-25ನೇ ಸಾಲಿನಲ್ಲಿ ನಾಲ್ಕು ಪಟ್ಟು ಹೆಚ್ಚು ಮರಿಗಳಿಗೆ ಜನ್ಮನೀಡಿವೆ.
ತಮಿಳುನಾಡಿನ ಕರಾವಳಿಯಲ್ಲಿ ಆಲಿವ್ ರಿಡ್ಲಿ ಆಮೆಗಳು 3.19 ಲಕ್ಷ ಮೊಟ್ಟೆಗಳನ್ನಿಟ್ಟಿದ್ದವು. ಇವುಗಳಲ್ಲಿ ಚೆನ್ನೈ ಕಡಲತೀರದಿಂದ ಕಾಂಚೀಪುರವರೆಗೂ ಸಮುದ್ರಕ್ಕೆ ಸೇರಲ್ಪಟ್ಟಿದ್ದ ಒಂದು ಸಾವಿರಕ್ಕೂ ಹೆಚ್ಚು ಮರಿಗಳು ಮೃತಪಟ್ಟಿದ್ದವು. ಈ ಆತಂಕದ ನಡುವೆಯೂ ಪ್ರಸಕ್ತ ಬಾರಿ ದಾಖಲೆ ಸಂಖ್ಯೆಯ ಮರಿಗಳು ಬದುಕುಳಿದಿವೆ.
ರಾಜ್ಯದ ಕರಾವಳಿ ತೀರದಲ್ಲಿ 3,19,895 ಮೊಟ್ಟೆಗಳು ಪತ್ತೆಯಾಗಿದ್ದವು. ಇವುಗಳಲ್ಲಿ 2,29,432 ಮರಿಗಳು ಜನ್ಮ ತಾಳಿ ಸಮುದ್ರಕ್ಕೆ ಸೇರಲ್ಪಟ್ಟಿವೆ. ಕಡಲೂರು ತೀರದಲ್ಲಿ 81,662 ಮರಿಗಳು, ಮೈಲಾಡುತುರೈ-38,582 ಹಾಗೂ ಚೆನ್ನೈ ಕಡಲಿಗೆ 37,689 ಮರಿಗಳು ಸೇರಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
2023-24ನೇ ಸಾಲಿನಲ್ಲಿ 2,15,778 ಮರಿಗಳು ಸಮುದ್ರ ಸೇರಿದ್ದವು. ಪ್ರಸಕ್ತ ಸಾಲಿನಲ್ಲಿ ಇದಕ್ಕಿಂತಲೂ ಹೆಚ್ಚಿನ ಮರಿಗಳು ಸಮುದ್ರ ಸೇರಿವೆ ಎಂದಿದೆ.

