ನವದೆಹಲಿ (PTI): ಸುಮಾರು ಒಂದೂವರೆ ಗಂಟೆ ದೇಶದ ಅಂದಾಜು 300 ಜಿಲ್ಲೆಗಳಲ್ಲಿ ಬುಧವಾರ ಸ್ವರಕ್ಷಣೆ ತಾಲೀಮನ್ನು ನಡೆಸಲಾಯಿತು. ಅಣ್ವಸ್ತ್ರ ಘಟಕ, ಸೇನಾ ನೆಲೆಗಳು, ತೈಲ ಶುದ್ಧೀಕರಣ ಘಟಕಗಳು, ಅಣೆಕಟ್ಟುಗಳು ಸೇರಿದಂತೆ ವಿವಿಧ ಸೂಕ್ಷ್ಮ ಸ್ಥಳಗಳಲ್ಲಿ ತಾಲೀಮು ನಡೆಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ತರಬೇತಿ ನೀಡಲಾಯಿತು.
ತಾಲೀಮಿನ ವೇಳೆ ವಾಯುದಾಳಿಯ ಮುನ್ನೆಚ್ಚರಿಕೆ ನೀಡುವ ಸೈರನ್‌ಗಳನ್ನು ಮೊಳಗಿಸಲಾಯಿತು. ಬಂಕರ್‌ಗಳನ್ನು ಶುಚಿಗೊಳಿಸಲಾಯಿತು. ಅಗ್ನಿ ಅವಘಡ ಸಂಭವಿಸಿದಾಗ ಏನು ಮಾಡಬೇಕು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೇಗೆ ಹೊರತೆಗೆಯಬೇಕು, ಬಹು ಅಂತಸ್ಥಿನ ಕಟ್ಟಡದ ಮಧ್ಯೆ ಸಿಲುಕಿರುವವರ ರಕ್ಷಣೆ ಹೇಗೆ ಕೈಗೊಳ್ಳಬೇಕು, ವೈದ್ಯಕೀಯ ತುರ್ತಿನ ವೇಳೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಕರ್ನಾಟಕ, ಹರಿಯಾಣ, ಪಂಜಾಬ್, ಅಸ್ಸಾಂ, ಅರುಣಾಚಲ ಪ್ರದೇಶ, ತೆಲಂಗಾಣ, ರಾಜಸ್ಥಾನ, ಕೇರಳ, ಸಿಕ್ಕಿಂ, ಮಹಾರಾಷ್ಟ್ರ, ದೆಹಲಿ, ಮಣಿಪುರ, ಒಡಿಶಾ, ಮಿಜೋರಾಂ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಾಲೀಮು ನಡೆಯಿತು.

