ಕುಂಬಳೆ: ಕುಂಬಳೆ ಸನಿಹದ ಭಾಸ್ಕರನಗರದಲ್ಲಿ ನಡೆದ ಸರಣಿ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಏಳು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ತಡರಾತ್ರಿ ತಾಸುಗಳ ಅಂತರದಲ್ಲಿ ಈ ಅಪಘಾತ ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ವಾಪಸಾಗುತ್ತಿದ್ದ ಕಾರು ಪಲ್ಟಿಯಾಗಿ ಅದರಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಇದಾದ ತಾಸುಗಳ ಅಂತರದಲ್ಲಿ ಇದೇ ಜಾಗದಲ್ಲಿ ಇನ್ನೊಂದು ಕಾರು ಮಗುಚಿಬಿದ್ದು, ಇದರಲ್ಲಿದ್ದ ನಾರಂಪಾಡಿ ಸನಿಹದ ಮಾಣಿಮೂಲೆ ನಿವಾಸಿ ಚಿತ್ರಾ, ಬೇಬಿ ಎಂಬವರು ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೂ, ಶಿವರಾಮ, ಭವ್ಯ, ದಿವ್ಯ, ಆದರ್ಶ್ ಹಾಗೂ ಅಶ್ವಿತ್ ಎಂಬವರನ್ನು ಕುಂಬಳೆಯ ಆಸ್ಪತ್ರೆಗೂ ದಾಖಲಿಸಲಾಗಿದೆ. ಪೇರಾಲ್‍ನಲ್ಲಿ ಗೃಹಪ್ರವೇಶ ಕಳೆದು ವಾಪಸಾಗುತ್ತಿದ್ದ ಸಂದರ್ಭ ಇವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಸ್ಥಳೀಯ ನವೋದಯ ಕ್ಲಬ್ ಸದಸ್ಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದರು. ಭಾಸ್ಕರ ನಗರದಲ್ಲಿ ಅಪಘಾತ ಮರುಕಳಿಸುತ್ತಿರುವ ಬಗ್ಗೆ ಚಾಲಕರು ಹಾಗೂ ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.




