HEALTH TIPS

ಭಯೋತ್ಪಾದಕ ದಾಳಿ ವಿಚಾರದಲ್ಲಿ UPA ನಡೆ ಟೀಕಿಸಿದ ಬಿಜೆಪಿ; ಕಾಂಗ್ರೆಸ್‌ ತಿರುಗೇಟು

ನವದೆಹಲಿ: ಭಾರತದ ಮೇಲೆ ಭಯೋತ್ಪಾದಕ ದಾಳಿಗಳು ನಡೆದ ಸಂದರ್ಭದಲ್ಲಿ ಹಿಂದಿನ ಯುಪಿಎ ಸರ್ಕಾರವು 'ನಿಷ್ಕ್ರಿಯತೆ' ವ್ಯಕ್ತಪಡಿಸಿತ್ತು ಎಂಬ ಬಿಜೆಪಿ ಆರೋಪಗಳಿಗೆ ಕಾಂಗ್ರೆಸ್‌, ಆರ್‌ಜೆಡಿ ತಿರುಗೇಟು ನೀಡಿವೆ. ಆಡಳಿತ ಪಕ್ಷ ಹಾಗೂ ಸರ್ಕಾರವು ಏಕತೆಯ ಸಂದೇಶ ಹರಡುವ ಬದಲು ರಾಜಕೀಯ ಮಾಡಲು ಹೊರಟಿದೆಯಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿವೆ.

'ಇಡೀ ದೇಶವೇ ಭಾರತೀಯರಾಗಿ ಏಕತೆಯ ಸಂದೇಶ ವ್ಯಕ್ತಪಡಿಸುವ ಸಂದರ್ಭದಲ್ಲಿ, ರಾಜಕೀಯವಾಗಿ ವಿಭಜಿಸುವ ಪ್ರಯತ್ನ ಖಂಡನೀಯ' ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಟೀಕಿಸಿದ್ದಾರೆ.

'ಶತ್ರುಗಳಿಗೆ ಗಟ್ಟಿಧ್ವನಿಯಲ್ಲಿ ಸ್ಪಷ್ಟ ಸಂದೇಶ ಕಳುಹಿಸಲಾಗಿದೆ. ನಮ್ಮ ಜೊತೆ ಜಗಳವಾಡಬೇಡಿ. ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದಂತಹ ನಿಷ್ಕ್ರಿಯತೆ ಈಗ ನಡೆಯೊಲ್ಲ. ಹೊಸ ಭಾರತ ನಿರ್ಮಾಣದಲ್ಲಿ ವ್ಯರ್ಥ ಶಾಂತಿ ಮಾತುಕತೆ ನಡೆಸುವಷ್ಟು ತಾಳ್ಮೆ ಇಲ್ಲ' ಎಂಬ ಅರ್ಥದ ಸಾಲುಗಳನ್ನು ಬರೆದು, 'ಆಪರೇಷನ್‌ ಸಿಂಧೂರ್' ಕಾರ್ಯಾಚರಣೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಬಿಜೆಪಿ ಅಪ್‌ಲೋಡ್‌ ಮಾಡಿತ್ತು.

'ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕ ದಾಳಿ ನಡೆದರೆ, ಮಾತುಕತೆಗೆ ಮುಂದಾಗಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಈ ನಿಲುವು ಬದಲಾಗಿದೆ' ಎಂದು ತಿಳಿಸಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, 'ಹಾಗಾದರೆ, ನಾವು ಈಗ ರಾಜಕೀಯ ಮಾಡಬೇಕೆ? ಇದು ರಾಜಕೀಯ ಮಾಡುವ ಸಮಯವೇ? ಸರ್ಕಾರಕ್ಕೆ ವಿರೋಧ ಪಕ್ಷಗಳ ಬೆಂಬಲ ಅಗತ್ಯವಿಲ್ಲವೇ? ಎಂದು 'ಎಕ್ಸ್‌'ನಲ್ಲಿಯೇ ಪ್ರಶ್ನಿಸಿದ್ದಾರೆ.

'ಈಗ ಏಕತೆ ಸಂದೇಶ ಕಳುಹಿಸುವ ಅಗತ್ಯವಿಲ್ಲವೇ? ಸರ್ಕಾರ ಹಾಗೂ ಬಿಜೆಪಿ ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದ್ದಾರೆ.

'ಸೇನೆ ಹಾಗೂ ಸರ್ಕಾರವನ್ನು ಇಡೀ ದೇಶ ಹಾಗೂ ಸರ್ವಪಕ್ಷಗಳು ಬೆಂಬಲಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬಿಜೆಪಿಯಿಂದ ರಾಜಕೀಯ ಸಲ್ಲದು, ಪ್ರಧಾನಿ ಮೋದಿ ಕೂಡಲೇ ಮಧ್ಯ ಪ್ರವೇಶಿಸಬೇಕು. ಬಿಜೆಪಿ ಹಾಕಿದ ಸಂದೇಶವು ಗಡಿಭಾಗದಲ್ಲಿ ದುರುಪಯೋಗವಾಗುವ ಸಾಧ್ಯತೆಯಿದೆ' ಎಂದು ಆರ್‌ಜೆಡಿಯ ಹಿರಿಯ ಸಂಸದ ಮನೋಜ್‌ ಕೆ. ಝಾ ತಿಳಿಸಿದ್ದಾರೆ.

 ಮನೋಜ್‌ ಕೆ. ಝಾ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries