ಇಂಫಾಲ: ರಾಜ್ಯದ ಐದು ಕಣಿವೆಯ ಜಿಲ್ಲೆಗಳ ಪ್ರಾದೇಶಿಕ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 11.45ರಿಂದ ಜಾರಿಗೆ ಬರುವಂತೆ 5 ದಿನಗಳವರೆಗೆ ವಿಎಸ್‌ಎಟಿ, ವಿಪಿಎನ್ ಸೇರಿದಂತೆ ಇಂಟರ್‌ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇಂಫಾಲ ಪಶ್ಚಿಮ, ಇಂಫಾಲ ಪೂರ್ವ, ತೌಬಲ್ , ಬಿಷ್ಣುಪುರ ಮತ್ತು ಕಕ್ಚಿಂಗ್ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಿಕೊಂಡು, ದ್ವೇಷ ಭಾಷಣ ಮತ್ತು ದ್ವೇಷದ ವಿಡಿಯೊ ಸಂದೇಶಗಳನ್ನು ಪ್ರಸಾರ ಮಾಡಿ ಸಾರ್ವಜನಿಕರನ್ನು ಕೆರಳಿಸುವ ಶಂಕೆ ಇದೆ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾಗಾಗಿ ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ತೌಬಲ್, ಕಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಸದ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಯುಕ್ತ ಎನ್. ಅಶೋಕ್ ಕುಮಾರ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.
ಮೈತೇಯಿ ಸಮುದಾಯದ ಅರಾಂಬಾಯಿ ತೆಂಗೋಲ್ (Arambai Tenggol) ಸಂಘಟನೆಯ ನಾಯಕನ ಬಂಧನದ ಬಳಿಕ ಶನಿವಾರ ರಾತ್ರಿ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಬಳಿಕ ಈ ಆದೇಶವನ್ನು ಹೊರಡಿಸಲಾಗಿದೆ .

