ನೈನಿತಾಲ್: ಉತ್ತರಾಖಂಡದ ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮೂರ್ಛೆ ಹೋಗಿದ್ದಾರೆ.
ಜಗದೀಪ್ ಧನಕರ್ ಅವರು ಭಾಷಣ ಮುಗಿಸಿ ವೇದಿಕೆಯತ್ತ ಬರುತ್ತಿದ್ದಂತೆ ಮೂರ್ಛೆ ಹೋಗಿದ್ದು, ಕೂಡಲೇ ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ಅವರನ್ನು ಹಿಡಿದುಕೊಂಡಿದ್ದಾರೆ.
ಕೆಲವು ನಿಮಿಷಗಳ ನಂತರ ಚೇತರಿಸಿಕೊಂಡ ಅವರು ತಮ್ಮ ಮಾಜಿ ಸಂಸದೀಯ ಸಹೋದ್ಯೋಗಿ ಮಹೇಂದ್ರ ಸಿಂಗ್ ಪಾಲ್ ಅವರನ್ನು ಅಪ್ಪಿಕೊಂಡು ಭಾವುಕರಾಗಿದ್ದಾರೆ.
ಸ್ಥಳದಲ್ಲಿದ್ದ ವೈದ್ಯರ ತಂಡ ಜಗದೀಪ್ ಅವರ ಆರೋಗ್ಯ ತಪಾಸಣೆ ನಡೆಸಿದೆ. ಸದ್ಯ ಚೇತರಿಸಿಕೊಂಡಿರುವ ಅವರು ಉತ್ತರಾಖಂಡ ರಾಜಭವನಕ್ಕೆ ತೆರಳಿದ್ದಾರೆ. ಇಂದು ಅಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಏನು:
ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದ ಧನಕರ್ ಅವರು, ಪ್ರೇಕ್ಷಕರೊಂದಿಗೆ ಕುಳಿತಿದ್ದ ಮಾಜಿ ಸಂಸದ ಮಹೇಂದ್ರ ಸಿಂಗ್ ಪಾಲ್ ಅವರನ್ನು ಭೇಟಿಯಾದರು.
ಇಬ್ಬರೂ ಭಾವುಕರಾಗಿ ಮಾತನಾಡಿದರು. ಪಾಲ್ ಅವರನ್ನು ಅಪ್ಪಿಕೊಂಡಿದ್ದ ಧನಕರ್ ಅವರು ಪ್ರಜ್ಞಾಹೀನರಾಗಿ ಕುಸಿದರು. ತಕ್ಷಣವೇ ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ನೀಡಿತು. ಚೇತರಿಸಿಕೊಂಡ ಬಳಿಕ ಅವರು ರಾಜಭವನಕ್ಕೆ ತೆರಳಿದರು.

