ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತಕ್ಕೆ ಆದ ಹಾನಿಯ ಬಗ್ಗೆ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಇಂದು ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. 'ನಷ್ಟ ಎಷ್ಟಾಯಿತು ಎಂಬುವುದು ಮುಖ್ಯವಲ್ಲ. ಬದಲಾಗಿ ಕಾರ್ಯಾಚರಣೆಯ ಫಲಿತಾಂಶ ಮುಖ್ಯ' ಎಂದು ಅವರು ಹೇಳಿದ್ದಾರೆ.
ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ''Future Wars and Warfare' ಕುರಿತು ಉಪನ್ಯಾಸ ನೀಡುವ ವೇಳೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಉಂಟಾದ ನಷ್ಟ ಫಲಿತಾಂಶಕ್ಕೆ ಹೋಲಿಸಿದರೆ ಗೌಣವಾಗಿವೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ಅವರು, 'ಇದು ಅತ್ಯಂತ ಕ್ರೌರ್ಯ ಕೃತ್ಯ. ಆಧುನಿಕ ಜಗತ್ತಿಗೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
'ಯುದ್ಧವಿಮಾನ ನಷ್ಟ ನಿಜ'
ಪಾಕಿಸ್ತಾನದ ಜೊತೆ ಈಚೆಗೆ ನಡೆದ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಕೆಲವು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ಅನಿಲ್ ಚೌಹಾಣ್ ಶನಿವಾರ ಒಪ್ಪಿಕೊಂಡಿದ್ದರು. ಆದರೆ, ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿರುವುದು 'ಸಂಪೂರ್ಣ ತಪ್ಪು' ಎಂದು ಅವರು 'ಬ್ಲೂಮ್‌ಬರ್ಗ್ ಟಿವಿ'ಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.

