ನವದೆಹಲಿ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ನಂತರ, ಪಾಕಿಸ್ತಾನದ ಜತೆಗೆ ಬಲಗೊಂಡಿರುವ ಚೀನಾದ ಸೇನಾ ಸಂಬಂಧ ಮತ್ತು ಈ ನಿಟ್ಟಿನಲ್ಲಿ ಭಾರತ ಕೈಗೊಳ್ಳಬೇಕಾದ ಸನ್ನದ್ಧತೆಗಳ ಕುರಿತು ಶಶಿ ತರೂರ್ ಅಧ್ಯಕ್ಷತೆಯಲ್ಲಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಚರ್ಚೆ ನಡೆಸಿತು.
ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಬೆಳೆಯುತ್ತಿರುವ ಕುರಿತೂ ವಿಪಕ್ಷ ಮುಖಂಡರು ಸಮಿತಿಯ ಗಮನ ಸೆಳೆದರು. ಕಳೆದ ಕೆಲವು ದಶಕಗಳಿಂದ, ದೇಶದ ರಕ್ಷಣಾ ಬಜೆಟ್‌ನಲ್ಲಿ ಜಿಡಿಪಿ ಪಾಲು ಗಣನೀಯವಾಗಿ ಕಡಿಮೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡ ಆರೋಪಿಸಿದ್ದಾಗಿ ಮೂಲಗಳು ತಿಳಿಸಿವೆ.
ಸ್ಥಾಯಿ ಸಮಿತಿ ಸಭೆಗೂ ಮುನ್ನ 'ಭಾರತದ ಹಿಂದೂ ಮಹಾಸಾಗರದ ಕಾರ್ಯತಂತ್ರ'ದ ಕುರಿತು ಶಶಿ ತರೂರ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್, ನೌಕಾಪಡೆಯ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ನೌಕಾಪಡೆಯ ಆಧುನೀಕರಣ ಮತ್ತು ಬಲವರ್ಧನೆಗೆ ಒತ್ತು ನೀಡಿ ದೀರ್ಘಾವಧಿಯ ಯೋಜನೆಗಳನ್ನು ರೂಪಿಸುವ ಕುರಿತು ರಾಜೇಶ್ ಕುಮಾರ್ ಸಿಂಗ್ ಸಲಹೆಗಳನ್ನು ನೀಡಿದರು.

