ನವದೆಹಲಿ: ಇಸ್ರೇಲ್ - ಇರಾನ್ ಸಂಘರ್ಷದಿಂದಾಗಿ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತದಿಂದಾಗಿ ಭಾರತವು ಜೂನ್‌ನಲ್ಲಿ ರಷ್ಯಾ ಹಾಗೂ ಅಮೆರಿಕದಿಂದ ತೈಲ ಖರೀದಿಯನ್ನು ಹೆಚ್ಚಿಸಿದೆ. ಇದರ ಪ್ರಮಾಣವು, ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದಾಗಿದೆ.
ಇಸ್ರೇಲ್ ಪಡೆಗಳು ಇರಾನ್ ಪರಮಾಣು ಘಟಕಗಳ ಮೇಲೆ ಜೂನ್ 13ರಂದು ಮೊದಲ ಬಾರಿ ದಾಳಿ ನಡೆಸಿದ ನಂತರ, ಉಭಯ ದೇಶಗಳ ನಡುವಣ ಸಂಘರ್ಷ ಉದ್ವಿಗ್ನಗೊಂಡಿದೆ. ಇದೀಗ, ಇಸ್ರೇಲ್ ಪರ ಸಂಘರ್ಷಕ್ಕೆ ಧುಮುಕಿರುವ ಅಮೆರಿಕ, ಇಂದು (ಭಾನುವಾರ, ಜೂನ್ 22) ಬೆಳಿಗ್ಗೆ ಇರಾನ್‌ನ ಮೂರು ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಿದೆ.
ಭಾರತ ಜೂನ್‌ನಲ್ಲಿ ರಷ್ಯಾದಿಂದ ನಿತ್ಯ 20 ಲಕ್ಷದಿಂದ 22 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದು ಕಳೆದ ಎರಡೂವರೆ ವರ್ಷಗಳಲ್ಲೇ ಅತ್ಯಧಿಕ. ಹಾಗೆಯೇ, ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಆಮದು ಮಾಡಿಕೊಂಡ ಒಟ್ಟು ಪ್ರಮಾಣಕ್ಕಿಂತಲೂ ಅಧಿಕ ಎಂಬುದು ಜಾಗತಿಕ ವ್ಯವಹಾರ ವಿಶ್ಲೇಷಣಾ ಸಂಸ್ಥೆ 'ಕೆಪ್ಲೆರ್' ದಾಖಲೆಗಳಿಂದ ತಿಳಿದುಬಂದಿದೆ.
ಭಾರತವು ರಷ್ಯಾದಿಂದ ಮೇ ತಿಂಗಳಲ್ಲಿ ಪ್ರತಿ ದಿನ 19.6 ಲಕ್ಷ ಬ್ಯಾರಲ್ ತೈಲ ಆಮದು ಮಾಡಿಕೊಳ್ಳುತ್ತಿತ್ತು.
ಅಮೆರಿಕದಿಂದ ಆಮದು ಮಾಡಿಕೊಳ್ಳುವ ಪ್ರಮಾಣದಲ್ಲಿಯೂ ಭಾರಿ ಏರಿಕೆಯಾಗಿದೆ. ಪ್ರತಿದಿನ ಆಮದು ಮಾಡಿಕೊಳ್ಳುವ ಪ್ರಮಾಣ ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು 2.8 ಲಕ್ಷ ಬ್ಯಾರಲ್‌ನಿಂದ 4.39 ಲಕ್ಷ ಬ್ಯಾರಲ್‌ಗೆ ಏರಿದೆ.
ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಇಡೀ ತಿಂಗಳು ಆಮದು ಮಾಡಿಕೊಂಡ ತೈಲವನ್ನು ಲೆಕ್ಕಿಸಿದರೆ ಪ್ರತಿದಿನದ ಸರಾಸರಿ ಅಂದಾಜು 20 ಲಕ್ಷ ಬ್ಯಾರಲ್‌ನಷ್ಟಿದೆ. ಕೆಪ್ಲರ್ ಅಂಕಿ-ಅಂಶಗಳ ಪ್ರಕಾರ, ಇದು ಕಳೆದ ತಿಂಗಳಿಗೆ ಹೋಲಿಸಿದರೆ ಕಡಿಮೆ.
ವಿಶ್ವದಲ್ಲಿ ಅತಿಹೆಚ್ಚು ತೈಲ ಬಳಸುವ ಹಾಗೂ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತವು, ಅಂದಾಜು 51 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ತರಿಸಿಕೊಳ್ಳುತ್ತದೆ. ಬಳಿಕ ಅದನ್ನು ಸಂಸ್ಕರಿಸಿ ಪೆಟ್ರೋಲ್, ಡಿಸೇಲ್‌ಗಳಾಗಿ ಬಳಸುತ್ತದೆ.
ಸಾಮಾನ್ಯವಾಗಿ ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳುವ ಭಾರತ, 2022ರ ಫೆಬ್ರುವರಿಯಲ್ಲಿ ರಷ್ಯಾದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾರಂಭಿಸಿತು. ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ, ಪಾಶ್ಚಾತ್ಯ ರಾಷ್ಟ್ರಗಳು ಹಾಗೂ ಯುರೋಪ್‌ನ ಕೆಲವು ದೇಶಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ನಿರ್ಬಂಧಗಳನ್ನು ಹೇರಿದ ಪರಿಣಾಮ ಭಾರತಕ್ಕೆ ತೈಲವು ರಿಯಾಯಿತಿ ದರದಲ್ಲಿ ಲಭಿಸುತ್ತಿದೆ.
ಇದರಿಂದಾಗಿ, ರಷ್ಯಾದಿಂದ ತೈಲ ಖರೀದಿಸುವ ಪ್ರಮಾಣ ನಾಟಕೀಯವಾಗಿ ಏರಿತು. ಕಚ್ಚಾ ಆಮದಿನ ಒಟ್ಟು ಪ್ರಮಾಣದಲ್ಲಿ ರಷ್ಯಾದ ಪಾಲು ಶೇ 1ರಷ್ಟಿದ್ದದ್ದು ಅಲ್ಪಾವಧಿಯಲ್ಲೇ ಶೇ 40-44ಕ್ಕೆ ಏರಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದಿಂದ ತೈಲ ಪೂರೈಕೆ ಮೇಲೆ ಯಾವುದೇ ಪರಿಣಾಮವಾಗಿಲ್ಲ.
'ಪಶ್ಚಿಮ ಏಷ್ಯಾದಿಂದ ತೈಲ ಸರಬರಾಜಿನ ಮೇಲೆ ಈವರೆಗೆ ಯಾವುದೇ ಪರಿಣಾಮ ಉಂಟಾಗಿಲ್ಲವಾದರೂ, ಮುಂದಿನ ದಿನಗಳಲ್ಲಿ ರಫ್ತು ಕಡಿಮೆಯಾಗುವ ಸಾಧ್ಯತೆ ಇದೆ' ಎಂದು ಕೆಪ್ಲರ್ ಅಂದಾಜಿಸಿದೆ.
'ಹಡಗುಗಳ ಮಾಲೀಕರು ಖಾಲಿ ಟ್ಯಾಂಕರ್‌ಗಳನ್ನು ಕೊಲ್ಲಿ ರಾಷ್ಟ್ರಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ, ಸಂಚರಿಸುತ್ತಿದ್ದ ಒಟ್ಟು ಹಡುಗಗಳ ಸಂಖ್ಯೆ 69ರಿಂದ 40ಕ್ಕೆ ಇಳಿದಿವೆ' ಎಂದು ತಿಳಿಸಿರುವ ಕೆಪ್ಲರ್, ಭಾರತವು ಮುಂದಿನ ದಿನಗಳಲ್ಲಿ ಇತರ ರಾಷ್ಟ್ರಗಳೊಂದಿಗೆ ವ್ಯವಹಾರ ಮಾಡಿಕೊಳ್ಳುವಂತೆ ಪ್ರಚೋದಿಸುತ್ತದೆ ಎಂದಿದೆ.
ಇರಾನ್, ಇರಾಕ್, ಒಮನ್, ಕುವೈತ್, ಕತಾರ್, ಯುಎಇಗೆ ಹೊಂದಿಕೊಂಡಿರುವ ಹೋರ್ಮುಜ್ ಜಲಸಂಧಿ ತೈಲ ರಫ್ತಿನ ಪ್ರಮುಖ ಮಾರ್ಗವಾಗಿದೆ. ಕತಾರ್‌ನಿಂದ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸಾಗಣೆ ಆಗುವುದೂ ಇಲ್ಲಿಯೇ.
ಆದರೆ, ಇಸ್ರೇಲ್ ಜೊತೆಗಿನ ಸಂಘರ್ಷ ಉಲ್ಬಣಿಸುತ್ತಿದ್ದಂತೆ ಈ ಜಲಸಂಧಿಯನ್ನು ಬಂದ್ ಮಾಡುವುದಾಗಿ ಇರಾನ್ ಬೆದರಿಕೆ ಹಾಕಿದೆ. ವಿಶ್ವದ ಐದನೇ ಒಂದರಷ್ಟು ತೈಲ ಈ ಮಾರ್ಗವಾಗಿಯೇ ಸರಬರಾಜಾಗುತ್ತದೆ. ಭಾರತಕ್ಕೆ ಆಮದಾಗುವ ಕಚ್ಚಾತೈಲದಲ್ಲಿ ಶೇ 40ರಷ್ಟು ಹಾಗೂ ಅರ್ಧದಷ್ಟು ಅನಿಲ ಇಂಧನ, ಕಿರಿದಾದ ಈ ಮಾರ್ಗದ ಮೂಲಕವೇ ಬರುತ್ತದೆ.
ಕೆಪ್ಲರ್ ಪ್ರಕಾರ, ಇರಾನ್ ಸೇನಾ ನೆಲೆಗಳು ಹಾಗೂ ಪರಮಾಣು ಮೂಲಸೌಕರ್ಯಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಗಳ ಬಳಿಕ ಹೋರ್ಮುಜ್ ಮುಚ್ಚುವಿಕೆ ಬಗ್ಗೆ ಕಳವಳ ಹೆಚ್ಚಾಗಿದೆ. ಇರಾನ್ ಮೂಲಭೂತವಾದಿಗಳು ಜಲಸಂಧಿ ಬಂದ್ ಬೆದರಿಕೆಯನ್ನು ತೀವ್ರಗೊಳಿಸಿದ್ದು, ಕಚ್ಚಾ ತೈಲ ದರವು ಪ್ರತಿ ಬ್ಯಾರಲ್‌ಗೆ ₹ 34,633 (400 ಡಾಲರ್) ತಲುಪುವ ಸಾಧ್ಯತೆ ಇದೆ ಅಲ್ಲಿನ (ಇರಾನ್) ಮಾಧ್ಯಮಗಳು ಎಚ್ಚರಿಸಿವೆ.
ಆದಾಗ್ಯೂ, ಇರಾನ್‌ಗೆ ಬೇರೆ ರಾಷ್ಟ್ರಗಳಿಂದ ಪ್ರಬಲ ಬೆಂಬಲವಿಲ್ಲದ ಕಾರಣ, ಜಲಮಾರ್ಗ ಸಂಪೂರ್ಣ ಮುಚ್ಚುವ ಸಂಭವನೀಯತೆ ಕಡಿಮೆ ಎಂದು ಕೆಪ್ಲರ್ ವಿಶ್ಲೇಷಿಸಿದೆ.

