ಕಾಸರಗೋಡು: ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಆಹ್ವಾನ ನೀಡಿದ್ದ ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದ ಕೊಳತ್ತೂರು ಗ್ರಾಮಾಧಿಕಾರಿ ಕಚೇರಿ ಮಹಿಳಾ ಉದ್ಯೋಗಿಯನ್ನು ತಡೆದು ಗೂಂಡಾ ವರ್ತನೆ ತೋರಿದ ಕ್ರಮವನ್ನು ವಿರೋಧಿಸಿ ಕೇರಳ ಎನ್‍ಜಿಒ ಅಸೋಸಿಯೇಷನ್ ಕಾಸರಗೋಡು ಸಿವಿಲ್ ಸ್ಟೇಷನ್ ಶಾಖಾ ಸಮಿತಿ ವತಿಯಿಂದ ಸಿವಿಲ್ ಸ್ಟೇಶನ್ ವಠಾರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ರಾಜ್ಯ ಸಮಿತಿ ಸದಸ್ಯೆ ಪಿ. ವತ್ಸಲಾ ಧರಣಿ ಉದ್ಘಾಟಿಸಿ ಮಾತನಡಿ, ಪ್ರತಿಭಟನೆಯಲ್ಲಿ ಭಾಗವಹಿಸದೇ ಇರುವವರಿಗೆ, ಎಂದಿನಂತೆ ಕೆಲಸ ಮಾಡುವ ಹಕ್ಕಿದೆ. ಆದರೆ ಕೆಲಸಕ್ಕೆ ತೆರಳುವವರ ವಿರುದ್ಧ ಗೂಂಡಾ ವರ್ತನೆ ತೋರಿರುವ ಮುಷ್ಕರಬೆಂಬಲಿಗರ ಕ್ರಮ ಖಂಡನೀಯ. ಕಳೆದ 9 ವರ್ಷಗಳಿಂದ ನೌಕರರಿಗೆ ಅನೇಕ ಸವಲತ್ತುಗಳನ್ನು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ನಿರಾಕರಿಸುತ್ತಾ ಬಂದಿದೆ. ಜತೆಗೆ ಹುದ್ದೆಗಳನ್ನು ಕಡಿತಗೊಳಿಸಿರುವುದನ್ನು ಪ್ರಶ್ನಿಸಲು ಮುಂದಾಗದೆ, ಮುಷ್ಕರಕ್ಕೆ ಮುಂದಾಗಿರುವುದು ಅವರ ದ್ವಿಮುಖ ನೀತಿಯಾಗಿದೆ ಎಂದು ಹೇಳಿದರು. ಶಾಖಾ ಸಮಿತಿ ಅಧ್ಯಕ್ಷ ಕೆ.ಜಯರಾಜ್ ಪೆರಿಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಲೋಕೇಶ್ ಎಂ.ಬಿ.ಎ.ಚಾರ್, ಎಂ.ಟಿ. ಪ್ರಸೀದಾ. ಎ.ಗಿರೀಶ್ ಕುಮಾರ್, ಗಿರಿಜಾ, ಪ್ರಸೀತಾ, ಸುನೋಜ್ ಮ್ಯಾಥ್ಯೂ, ಶಿವಕುಮಾರ್, ನವನೀತ್, ಬಾಲಕೃಷ್ಣನ್ ಮತ್ತು ಸಫೀನಾ ಉಪಸ್ಥಿತರಿದ್ದರು.

