ಪೆರ್ಲ: ಉಕ್ಕಿನಡ್ಕ ಸನಿಹ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ವಠಾರದಲ್ಲಿ ಬೀದಿನಾಯಿ ಅಡ್ಡಬಂದ ಪರಿಣಾಮ ಆಟೋರಿಕ್ಷಾ ಮಗುಚಿಬಿದ್ದು, ಚಾಲಕ ಮೃತಪಟ್ಟಿದ್ದಾರೆ. ಪಡ್ರೆ ಶಿವಗಿರಿ ನಿವಾಸಿ ದೇವಣ್ಣ ನಾಯ್ಕ್ ಅವರ ಪುತ್ರ, ಪ್ರವೀಣ(29)ಮೃತಪಟ್ಟ ಯುವಕ. ಪೆರ್ಲದಲ್ಲಿ ಆಟೋ ಚಾಲಕರಾಗಿದ್ದ ಇವರು, ಶನಿವಾರ ಬೆಳಗ್ಗೆ ಬಣ್ಪುತ್ತಡ್ಕ ಪ್ರದೇಶಕ್ಕೆ ಬಾಡಿಗೆ ತೆರಳಿ ವಾಪಸಾಗುವ ಮಧ್ಯೆ ಅಪಘಾತ ಸಂಭವಿಸಿದೆ. ನಾಯಿ ಆಟೋರಿಕ್ಷಾಕ್ಕೆ ಅಡ್ಡ ಸಂಚರಿಸಿದ್ದು, ಇದನ್ನು ತಪ್ಪಿಸುವ ಯತ್ನದಲ್ಲಿದ್ದಾಗ ಆಟೋರಿಕ್ಷಾ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಪ್ರವೀಣ್ ಅವರನ್ನು ಕಾಸರಗೋಡಿಗೆ ತಲುಪಿಸಿ, ಉನ್ನತ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿರುವ ಮಧ್ಯೆ ಸಾವು ಸಂಭವಿಸಿದೆ. ಅವರು ತಂದೆ, ತಾಯಿಯನ್ನು ಅಗಲಿದ್ದಾರೆ.


