ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ಬಿರುಸಿನ ಮಳೆ ಆರಂಭಗೊಂಡಿದ್ದು, ರಾಜ್ಯಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜು. 20ರ ವರೆಗೂ ರೆಡ್ ಅಲರ್ಟ್ ಜಾರಿಗೊಳಿಸಲಾಗಿದ್ದರೆ, 21ರಂದು ಕಾಸರಗೋಡು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಿರುಸಿನ ಮಳೆ ಹಿನ್ನೆಲೆಯಲ್ಲಿ ಗುರುವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು. ಕಾಸರಗೋಡು ಅಲ್ಲದೆ, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜಾರಿಗೊಳಿಸಲಾಗಿದೆ.
ತೀವ್ರಗೊಂಡ ಸಮುದ್ರಕೊರೆತ:
ಜಿಲ್ಲೆಯ ತ್ರಿಕ್ಕನ್ನಾಡ್, ಕೋಟಿಕುಳಂ, ಕುಂಬಳೆ ಸನಿಹದ ಕೊಯಿಪ್ಪಾಡಿ, ಮೊಗ್ರಾಲ್‍ಪುತ್ತೂರಿನ ಕಾವುಗೋಳಿ, ಮಂಜೇಶ್ವರ ಪೆರಿಂಗಡಿ ಪ್ರದೇಶದಲ್ಲಿ ಸಮುದ್ರಕೊರೆತ ತೀವ್ರಗೊಂಡಿದೆ. ದಕ್ಷಿಣದ ಕಾಶಿ ಎಂದೇ ಖ್ಯಾತಿ ಪಡೆದಿರುವ ಬೇಕಲ ಸನಿಹದ ತ್ರಿಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ಎದುರು ಸಮುದ್ರ ಕೊರೆತ ಬಿರುಸುಗೊಂಡಿದ್ದು, ಕಾಸರಗೋಡು-ಕಾಞಂಗಾಡು ಕೆಎಸ್‍ಟಿಪಿ ರಸ್ತೆಗೂ ಹಾನಿ ಸಂಭವಿಸಿದೆ. ರಸ್ತೆಯಿಂದ ಕೆಲವೇ ಮೀಟರ್ ಅಂತರದಲ್ಲಿರುವ ದೇವಸ್ಥಾನ ಅಪಾಯ ಎದುರಿಸುತ್ತಿದ್ದು, ತಕ್ಷಣ ತುರ್ತು ಕಾಂಗಾರಿ ಕೈಗೊಳ್ಳುವ ಮೂಲಕ ದೇವಾಲಯವನ್ನು ರಕ್ಷಿಸುವಂತೆ ಭಕ್ತಜನರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ತುರ್ತು ಪರಿಹಾರ ಕೈಗೊಳ್ಳದಿದ್ದಲ್ಲಿ ಒಂದೆರಡು ದಿವಸಗಳಲ್ಲಿ ರಸ್ತೆ ಸಂಪೂರ್ಣ ಕಡಲಗರ್ಭ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಕರಾವಳಿ ಪ್ರದೇಶವನ್ನು ಸಮುದ್ರ ಕೊರೆತದಿಂದ ರಕ್ಷಿಸಿ, ಜನರ ಜೀವ, ಮನೆ ಮತ್ತು ಆಸ್ತಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಈ ಪ್ರದೇಶದಲ್ಲಿ ನೂರೈವತ್ತು ಮೀಟರ್‍ಗೂ ಹೆಚ್ಚು ಭೂಪ್ರದೇಶವನ್ನು ಸಮುದ್ರ ಆವರಿಸಿದೆ.
ಮಧೂರು ಕ್ಷೇತ್ರಕ್ಕೆ ನೀರು:
ಜಿಲ್ಲೆಯ ಬಹುತೇಕ ಹೊಳೆಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿರುವ ನಾಗರಿಕರನ್ನು ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಮಧುವಾಹಿನಿ ಹೊಳೆ ತುಂಬಿಹರಿಯುತ್ತಿರುವ ಹಿನ್ನೆಲೆಯಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಆಂಶಿಕ ಜಲಾವೃತಗೊಂಡಿದೆ. ದೂರದೂರಿಂದ ಆಗಮಿಸಿದ್ದ ಭಕ್ತಾದಿಗಳು ಮೊಣಕಾಲು ವರೆಗಿನ ನೀರಿನಲ್ಲೇ ಸಂಚರಿಸಿ ಶ್ರೀದೇವರ ದರ್ಶನ ನಡೆಸಿದರು. ಮಲೆ ಬಿರುಸುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
PHOTOS: ಮಧೂರು ಕ್ಷೇತ್ರದೊಳಗೆ ನೀರು ತುಂಬಿಕೊಂಡಿರುವುದರಿಂದ ಭಕ್ತಾದಿಗಳು ನೀರಲ್ಲೇ ಸಂಚರಿಸಿ ಶ್ರೀದೇವರ ದರ್ಶನ ಪಡೆದರು.
: ತ್ರಿಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ಎದುರು ಸಮುದ್ರ ಕೊರೆತ ಬಿರುಸುಗೊಂಡಿದ್ದು ಕೆಎಸ್‍ಟಿಪಿ ರಸ್ತೆಗೆ ಹಾನಿ ಸಂಬವಿಸಿದೆ.



