ಕಾಸರಗೋಡು: ಪ್ರಾದೇಶಿಕ ರಜಾ ದಿನವಾದ ನೂಲಹುಣ್ಣಿಮೆಯ ಋಗುಪಾಕರ್ಮದ ದಿನ ಕೇರಳ ಸರ್ಕಾರ ನಿಗದಿಪಡಿಸಿರುವ ಲೋಕಸೇವಾ ಆಯೋಗ(ಪಿಎಸ್ಸಿ)ದ ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಕಾಸರಗೋಡು ಬ್ರಾಹ್ಮಣ ಪರಿಷತ್ ವಾಟ್ಸಪ್ ಗ್ರೂಪ್ ಸರ್ಕಾರವನ್ನು ಆಗ್ರಹಿಸಿದೆ. ಈ ಬಗ್ಗೆ ಎಡ್ಮಿನ್ ಜಯನಾರಾಯಣ ತಾಯನ್ನೂರು ಅವರು ಪಿಎಸ್ಸಿ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಪರೀಕ್ಷಾ ದಿನಾಂಕ ಬದಲಾಯಿಸಲು ಆಗ್ರಹಿಸಿದ್ದಾರೆ.
ಆಗಸ್ಟ್ 9ರಂದು ಕೇರಳ ರಾಜ್ಯ ಸಿವಿಲ್ ಸಪ್ಲೈಸ್ ಕೋರ್ಪರೇಷನ್ ಲಿ.ನಲ್ಲಿ ಅಸಿಸ್ಟೆಂಟ್ ಸೇಲ್ಸ್ ಮೆನ್ ಹುದ್ದೆಗೆ ಪಿಎಸ್ಸಿ ಪರೀಕ್ಷೆ ಆಯೋಜಿಸಲಾಘಿದ್ದು, ಈ ದಿನ ಬ್ರಾಹ್ಮಣರ ಆಚಾರನುಷ್ಠಾನ ವಿಧೇಯ ಋಗುಪಾಕರ್ಮದ ದಿನವಾಗಿರುತ್ತದೆ. ಅಂದು ಬ್ರಾಹ್ಮಣ ಸಮುದಾಯದ ಜನಿವಾರ ಬದಲಾಯಿಸುವ ಸಾಂಪ್ರದಾಯಿಕ ಆಚಾರ ವಿಧಿ ವಿಧಾನವಿದ್ದು, ವಷರ್ಂಪ್ರತಿ ಸರ್ಕಾರ ನಿಯಂತ್ರಿತ ರಜೆ ನೀಡುತ್ತಿದೆ.
ಆದರೆ ಇದೇ ದಿನ ಪರೀಕ್ಷೆ ಇರಿಸಿಕೊಂಡಿರುವುದು ಬ್ರಾಹ್ಮಣ ಸಮುದಾಯವನ್ನು ಪರೀಕ್ಷೆಯಿಂದ ಹೊರತುಪಡಿಸುವ ಹುನ್ನಾರ ಅಡಕವಾಗಿದೆ ಎಂದು ಜಯನಾರಾಯಣ ತಾಯನ್ನೂರು ಲೋಕಸೇವಾ ಆಯೋಗ ಅಧ್ಯಕ್ಷರಿಗೆ ಕಳುಹಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಪ್ರಸಕ್ತ ದಿನ ಪರೀಕ್ಷೆ ನಡೆಸಿದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅಸಾಧ್ಯವಾಗಲಿದೆ. ಈ ಮೂಲಕ ಬ್ರಾಹ್ಮಣ ಸಮುದಾಯದವರು ಸರ್ಕಾರಿ ಉದ್ಯೋಗದ ಅವಕಾಶದಿಂದ ವಂಚಿತರಾಗಬೇಕಾಗಿಬರಲಿದೆ. ಈ ಕಾರಣದಿಂದ ಪರೀಕ್ಷಾ ದಿನಾಂಕವನ್ನು ಮತ್ತೊಂದು ದಿನಕ್ಕೆ ಬದಲಾಯಿಸಬೇಕೆಂದು ಜಯನಾರಾಯಣ ಮನವಿಯಲ್ಲಿ ಆಗ್ರಹಿಸಿದ್ದಾರೆ.

