HEALTH TIPS

ಹಿಮಾಚಲ: ಬಹು ಪತಿತ್ವ ಸಂಪ್ರದಾಯ ಉಳಿಸಲು ಒಂದೇ ಹುಡುಗಿಯ ಮದುವೆಯಾದ ಸಹೋದರರು

ಶಿಮ್ಲಾ: ಹಿಮಾಚಲ ಪ್ರದೇಶದ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಹಾಥಿ ಸಮುದಾಯದ ಶತಮಾನಗಳಷ್ಟು ಹಳೆಯ ಬಹು ಪತಿತ್ವ ಸಂಪ್ರದಾಯವನ್ನು ಉಳಿಸಲು ಮುಂದಾಗಿರುವ ಸಹೋದರರಿಬ್ಬರು, ಒಂದೇ ಹುಡುಗಿಯನ್ನು ಮದುವೆಯಾಗಿದ್ದಾರೆ.

ಹಾಥಿ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಈ ವಿವಾಹವು ನೆರವೇರಿದ್ದು, ಸಹೋದರಾದ ಪ್ರದೀಪ್‌ ಮತ್ತು ಕಪಿಲ್‌, ಸುನೀತಾ ಎಂಬವರನ್ನು ವರಿಸಿದ್ದಾರೆ.

'ಮೂವರು ಒಟ್ಟಿಗೆ ಸೇರಿ ತೆಗೆದುಕೊಂಡ ನಿರ್ಧಾರವಿದು' ಎಂದು ವರ ಪ್ರದೀಪ್‌ ಹೇಳಿದ್ದಾರೆ. 'ನಮ್ಮ ಮೂಲದ ಬಗ್ಗೆ ನಮಗೆ ಹೆಮ್ಮೆಯಿದೆ. ಅದಕ್ಕಾಗಿಯೇ ಬಹಿರಂಗವಾಗಿ ನಮ್ಮ ಸಂಪ್ರದಾಯವನ್ನು ಅಪ್ಪಿಕೊಂಡಿದ್ದೇವೆ' ಎಂದಿದ್ದಾರೆ.

'ನಾನು ವಿದೇಶದಲ್ಲಿರಬಹುದು. ಆದರೆ, ಮೂವರು ಒಂದಾಗಿ ಸಂಸಾರವನ್ನು ಸಾಗಿಸುತ್ತೇವೆ. ಸಂಪ್ರದಾಯ ಉಳಿಸುವ ಈ ಪಯಣದಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡುತ್ತೇವೆ' ಎಂದು ಕಪಿಲ್‌ ಹೇಳಿದ್ದಾರೆ.

'ಇದು ಸಂಪೂರ್ಣವಾಗಿ ನನ್ನ ಆಯ್ಕೆಯಾಗಿತ್ತು. ಯಾರ ಒತ್ತಾಯದಿಂದ ಈ ನಿರ್ಧಾರ ಮಾಡಿಲ್ಲ. ನನಗೆ ನನ್ನ ಸಂಪ್ರದಾಯದ ಬಗ್ಗೆ ಹೆಮ್ಮೆ ಇದೆ. ಆದ್ದರಿಂದ ಇದನ್ನು ಸ್ವಇಚ್ಛೆಯಿಂದ ಆರಿಸಿಕೊಂಡೆ' ಎಂದು ವಧು ಸುನೀತಾ ಹೇಳಿದ್ದಾರೆ.

'ಇದೇನು ಮೊದಲ ವಿವಾಹವಲ್ಲ. ಇಂತಹ ವಿವಾಹಗಳು ಸದ್ದಿಲ್ಲದೇ ನಡೆಯುತ್ತಿರುತ್ತವೆ. ನಮ್ಮ ಹಳ್ಳಿಯಲ್ಲಿ ಇಬ್ಬರು ಅಥವಾ ಮೂವರು ಸಹೋದರರು ಒಬ್ಬಳೇ ಹೆಂಡತಿಯನ್ನು ಹೊಂದಿದ್ದಾರೆ. ಈ ವಿವಾಹದ ವಿಶೇಷತೆ ಏನೆಂದರೆ, ಸಂಪ್ರದಾಯವನ್ನು ಹೆಮ್ಮೆಯಿಂದ ಒಪ್ಪಿಕೊಂಡು ಬಹಿರಂಗವಾಗಿ ಆಗಿರುವುದು' ಎಂದು ಶಿಲೈ ಗ್ರಾಮದ ನಿವಾಸಿ ಬಿಶನ್ ತೋಮರ್ ಹೇಳಿದ್ದಾರೆ.

ಈ ಪ್ರದೇಶದಲ್ಲಿ ಬಹುಪತಿತ್ವ ಸಾಮಾನ್ಯ ಆಚರಣೆಯಾಗಿದ್ದು, ಪೂರ್ವಜರ ಭೂಮಿ ವಿಭಜನೆಯಾಗದಂತೆ ತಡೆಯಲು, ಹೆಣ್ಣು ವಿಧವೆಯಾಗುವುದನ್ನು ತಪ್ಪಿಸುವುದಕ್ಕೆ ಪೂರ್ವಜರು ಕಂಡುಕೊಂಡ ಮಾರ್ಗವಿದು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries