ಬದಿಯಡ್ಕ: ಕೇರಳ ರಾಜ್ಯ ಅರಣ್ಯ ಇಲಾಖೆಯ ಸಚಿವ ಶಶೀಂದ್ರನ್ ಅವರು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳನ್ನು ಕೊಲ್ಲೂರಿನಲ್ಲಿ ಭೇಟಿ ಮಾಡಿ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.
ಜುಲೈ 10 ರಂದು ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ತೊಡಗಿಕೊಳ್ಳುವ ನಿಟ್ಟಿನಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿ ಶ್ರೀದೇವರ ದರ್ಶನಕ್ಕೆ ತೆರಳಿದ್ದ ಸಂದರ್ಭ ಸಚಿವರು ಶ್ರೀಗಳನ್ನು ಭೇಟಿಯಾದರು. ದೇವರ ದರ್ಶನದೊಂದಿಗೆ ಶಂಕರಾಚಾರ್ಯ ಪರಂಪರೆಯ ಎಡನೀರು ಮಠದ ಶ್ರೀಗಳ ಭೇಟಿ ತನ್ನ ಪಾಲಿನ ಸೌಭಾಗ್ಯ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿ ಮುಂದಿನ ದಿನಗಳಲ್ಲಿ ಶ್ರೀಮಠಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ವತಿಯಿಂದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಶ್ರೀಗಳೊಂದಿಗೆ ಹಿರಿಯ ವಕೀಲ ಎಂ. ನಾರಾಯಣ ಭಟ್, ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಜೊತೆಗಿದ್ದರು.

.jpg)
