ಲಖನೌ: ಸಮಾಜದಲ್ಲಿನ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಶವೊಡ್ಡಿ ಮತಾಂತರ ದಂಧೆ ನಡೆಸುತ್ತಿರುವ ಬೃಹತ್ ಜಾಲವನ್ನು ಭೇದಿಸಿರುವ ಉತ್ತರ ಪ್ರದೇಶ ಪೊಲೀಸರು, ಆರು ರಾಜ್ಯಗಳ 10 ಜನರನ್ನು ಶನಿವಾರ ಬಂಧಿಸಿದ್ದಾರೆ.
'33 ಹಾಗೂ 18 ವರ್ಷದ ಸೋದರಿಯರು ಆಗ್ರಾದಿಂದ ಕಳೆದ ಮಾರ್ಚ್ನಲ್ಲಿ ಕಾಣೆಯಾಗಿದ್ದರು.
ಈ ಪ್ರಕರಣದ ತನಿಖೆ ನಡೆಸಿದಾಗ, ಇವರನ್ನು ಅಕ್ರಮವಾಗಿ ಬೇರೆ ಧರ್ಮಕ್ಕೆ ಮತಾಂತರ ಮಾಡಿರುವುದು ಪತ್ತೆಯಾಯಿತು. ಇದರಲ್ಲಿ ಒಬ್ಬ ಮಹಿಳೆ ಎಕೆ-47 ಬಂದೂಕು ಹಿಡಿದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು' ಎಂದು ಪೊಲೀಸರು ತಿಳಿಸಿದ್ದಾರೆ.
'ಲವ್ ಜಿಹಾದ್ ಮತ್ತು ತೀವ್ರವಾದಿಗಳ ಗುಂಪು ಈ ಸೋದರಿಯರನ್ನು ಮತಾಂತರಗೊಳಿಸಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇವರಿಗೆ ಅಮೆರಿಕ ಮತ್ತು ಕೆನಡಾದಿಂದ ಹಣ ಸಂದಾಯವಾಗಿದೆ. ಇಲ್ಲಿ ನಿಷೇಧಿತ ಐಎಸ್ಐಎಸ್ ಸಂಘಟನೆ ಕಟ್ಟುವ ಸಂಚು ಇರುವುದು ಪತ್ತೆಯಾಗಿದೆ' ಎಂದು ಆಗಾ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ಹೇಳಿದ್ದಾರೆ.
''ಮಿಷನ್ ಅಸ್ಮಿತಾ' ಎಂಬ ಈ ಕಾರ್ಯಾಚರಣೆಯಲ್ಲಿ ರಾಜಸ್ಥಾನದ ಮೂವರು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ತಲಾ ಇಬ್ಬರು ಹಾಗೂ ಗೋವಾ, ಉತ್ತರಾಖಂಡ ಮತ್ತು ದೆಹಲಿಯ ತಲಾ ಒಬ್ಬರನ್ನು ಬಂಧಿಸಲಾಗಿದೆ. ಎಸ್ಟಿಎಫ್ ಮತ್ತು ಭಯೋತ್ಪಾದನ ನಿಗ್ರಹ ದಳ ಈ ಕಾರ್ಯಾಚರಣೆ ನಡೆಸಿದೆ' ಎಂದು ಡಿಜಿಪಿ ರಾಜೀವ್ ಕೃಷ್ಣ ತಿಳಿಸಿದ್ದಾರೆ.
'ಲವ್ ಜಿಹಾದ್, ಅಕ್ರಮವಾಗಿ ಮತಾಂತರ ದಂಧೆ ನಡೆಸುವವರು, ತೀವ್ರವಾದಿಗಳು ಮತ್ತು ಜಾಗತಿಕ ಮಟ್ಟದಲ್ಲಿರುವ ಜಿಹಾದಿಗಳ ಜತೆಗೂಡಿ ರಾಷ್ಟ್ರದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಜಾಲದೊಂದಿಗೆ ಕೈಜೋಡಿಸಿದವರನ್ನು ಗುರಿಯಾಗಿಸಿ 'ಮಿಷನ್ ಅಸ್ಮಿತಾ' ಆರಂಭಿಸಲಾಗಿದೆ' ಎಂದು ಅವರು ವಿವರಿಸಿದರು.

