ಕಾಸರಗೋಡು: ಹೆಚ್ಚುವರಿ ಚಿನ್ನಾಭರಣಕ್ಕಾಗಿ ಪತ್ನಿಗೆ ಕಿರುಕುಳ ನೀಡಿರುವುದಲ್ಲದೆ, ತವರಿಂದ ಚಿನ್ನ ತಂದುಕೊಡದ ಹಿನ್ನೆಲೆಯಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಬೆಳಿಂಜದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇಬ್ರಾಹಿಂ ಬಾದುಷಾ ಎಂಬಾತನ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ದೇಲಂಪಾಡಿ ನಿವಾಸಿ ರಾಶಿದಾ(23)ಅವರು ನೀಡಿದ ದೂರಿನನ್ವಯ ಈ ಕೇಸು.
2018 ಮೇ 18ರಂದು ರಾಶಿದಾ-ಇಬ್ರಾಹಿಂ ಬಾದುಷಾ ವಿವಾಹ ನಡೆದಿದ್ದು, ನಂತರ ಪುತ್ತೂರು ಕಾವು ಎಂಬಲ್ಲಿ ದಂಪತಿ ವಾಸಿಸುತ್ತಿದ್ದರು. ವಿವಾಹ ಸಂದರ್ಭ ವರದಕ್ಷಿಣೆ ರೂಪದಲ್ಲಿ ಎಂಟು ಪವನು ಚಿನ್ನ ನೀಡಲಾಗಿದ್ದು, ನಂತರ ತವರಿಂದ ಹೆಚ್ಚಿನ ಚಿನ್ನ ತಂದುಕೊಡುವಂತೆ ಪತಿ ಇಬ್ರಾಹಿಂ ಬಾದುಷಾ ನಿರಂತರ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದನು. ನಂತರ ಇಬ್ರಾಹಿಂ ಬಾದುಷಾ ಬೆಳಿಂಜದ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದಾನೆ. ಅಲ್ಲೂ ಕಿರುಕುಳ ಮುಂದುವರಿಸಿದ್ದು, ಆ. 7ರಂದು ತನ್ನ ಮೇಲೆ ಹಲ್ಲೆಗೈದು, ತ್ರಿವಳಿ ತಲಾಖ್ ಮೂಲಕ ವಿವಾಹ ಸಂಬಂಧ ಕೊನೆಗೊಳಿಸಿ ತೆರಳಿರುವುದಾಗಿ ರಾಶಿದಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

