ನವದೆಹಲಿ: 'ಸುರಕ್ಷಿತ ನಗರ ಯೋಜನೆಗಾಗಿ ನಗರಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳಲ್ಲಿ ದಾಖಲಾಗುವ ಸಂಶಯಾಸ್ಪದ ಹಾಗೂ ಅಪರಾಧಿ ಪ್ರವೃತ್ತಿಯುಳ್ಳವರ ಪತ್ತೆಗೆ ಮುಖ ಗುರುತಿಸುವಿಕೆ ವ್ಯವಸ್ಥೆ (ಫೇಷಿಯಲ್ ರೆಕೆಗ್ನಿಷನ್ ಸಿಸ್ಟಂ) ಅನುಷ್ಠಾನಕ್ಕೆ ಕೇಂದ್ರ ಗೃಹ ಇಲಾಖೆ ಅಸ್ತು ಎಂದಿದೆ' ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಬುಧವಾರ ಹೇಳಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ, 'ದೆಹಲಿ ಪೊಲೀಸರು 'ಸುರಕ್ಷಿತ ನಗರ ಯೋಜನೆ' ಅನುಷ್ಠಾನಗೊಳಿಸುತ್ತಿದ್ದಾರೆ. ದೆಹಲಿಯ ಎನ್‌ಸಿಟಿ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಸಿ4ಐಗಳ ಅಳವಡಿಕೆ, ನಿಯಂತ್ರಣ ಮತ್ತು ಸಂವಹನ ಕೇಂದ್ರ, ಕಂಪ್ಯೂಟರ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.
'ಈ ಎಲ್ಲಾ ಅತ್ಯಾಧುನಿಕ ಸಾಧನಗಳ ಮೂಲಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯ' ಎಂದು ಸಂಸದ ಸಾಕ್ತೆ ಗೋಖಲೆ ಅವರ ಪ್ರಶ್ನೆಗೆ ಉತ್ತರಿಸಿದರು.
ದೆಹಲಿಯ ಚಾಣಕ್ಯಪುರಿಯಲ್ಲಿ, ಮುಂಜಾನೆ ವಿಹಾರಕ್ಕೆ ಹೋಗುತ್ತಿದ್ದಾಗ ಕಳ್ಳನೋರ್ವ ತನ್ನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದೆ ಸುಧಾ ರಾಮಕೃಷ್ಣನ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದು ರಾಷ್ಟ್ರವ್ಯಾಪಿ ಸುದ್ದಿಯಾಗುವುದರ ಜತೆಗೆ, ದೆಹಲಿಯಲ್ಲಿ ಭದ್ರತೆಯ ವಿಷಯ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

