ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಹಿಂದೂ ನಂಬಿಕೆ ಮತ್ತು ಶಬರಿಮಲೆಯ ಧಾರ್ಮಿಕ ನಂಬಿಕೆ, ಸಂಪ್ರದಾಯಗಳನ್ನು ಅಗೌರವಿಸಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಕೇರಳದ CPI (ಮಾರ್ಕ್ಸ್‌ವಾದಿ) ಸರ್ಕಾರವು ಅಯ್ಯಪ್ಪ ಸಂಗಮಂ ಎಂಬ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಆಹ್ವಾನಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಚಂದ್ರಶೇಖರ್ ಇದು ಜನರನ್ನು ಮೂರ್ಖರನ್ನಾಗಿಸುವ ನಾಟಕ ಎಂದು ಬಣ್ಣಿಸಿದ್ದು, ಹಿಂದೂಗಳು ಮತ್ತು ಅಯ್ಯಪ್ಪ ಭಕ್ತರಿಗೆ ಅವಮಾನ ಮಾಡಿದ್ದಕ್ಕಾಗಿ ಇಬ್ಬರೂ ನಾಯಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದು ಬಿಜೆಪಿ ಎಲ್ಲಾ ಕಾರ್ಯಕರ್ತರು ಮತ್ತು ಕೇರಳ-ತಮಿಳನಾಡಿನ ಹಿಂದೂಗಳಿಂದ ಪಿಣರಾಯಿ ವಿಜಯನ್ ಹಾಗೂ ಎಂಕೆ ಸ್ಟಾಲಿನ್ ಅವರಿಗೆ ಸ್ಪಷ್ಟ ಸಂದೇಶವಾಗಿದೆ. ನೀವಿಬ್ಬರೂ ಹಲವು ವರ್ಷಗಳಿಂದ ಶಬರಿಮಲೆ, ಅಯಪ್ಪ ಭಕ್ತರು ಮತ್ತು ಹಿಂದೂ ನಂಬಿಕೆಗೆ ಹಾನಿ ಮತ್ತು ಅವಮಾನ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.
ಪಿಣರಾಯಿ ವಿಜಯನ್ ಅವರು ಅನೇಕ ಅಯ್ಯಪ್ಪ ಭಕ್ತರನ್ನು ಜೈಲಿಗೆ ಹಾಕಿದ್ದಾರೆ, ಇನ್ನೂ ಹಲವರ ವಿರುದ್ಧ ಕೇಸುಗಳನ್ನು ಹಾಕಿದ್ದಾರೆ, ಅಯ್ಯಪ್ಪ ಭಕ್ತರ ಮೇಲೆ ಪೊಲೀಸ್ ದೌರ್ಜನ್ಯವನ್ನು ಮಾಡಿದ್ದಾರೆ ಮತ್ತು ಶಬರಿಮಲೆಯ ಪವಿತ್ರ ಸಂಪ್ರದಾಯಗಳ ಉಲ್ಲಂಘನೆ ಮತ್ತು ಅವಮಾನಿಸಲು ಎಲ್ಲವನ್ನೂ ಮಾಡಿದ್ದಾರೆ. ಸ್ಟಾಲಿನ್ ಮತ್ತು ಅವರ ಮಗ ಪದೇ ಪದೇ ಹಿಂದೂಗಳನ್ನು ಅವಮಾನಿಸಿದ್ದಾರೆ ಮತ್ತು ಇತರ ವಿಷಯಗಳ ಜೊತೆಗೆ ಹಿಂದೂ ನಂಬಿಕೆಯನ್ನು ವೈರಸ್ ಎಂದು ಉಲ್ಲೇಖಿಸಿದ್ದಾರೆ.
ಇವುಗಳು ಪ್ರತಿಯೊಬ್ಬ ಹಿಂದೂಗಳ ಸ್ಮರಣೆಯಲ್ಲಿ ಉಳಿದಿದ್ದು, ಎಂದಿಗೂ ಮರೆಯಲಾಗುವುದಿಲ್ಲ ಅಥವಾ ಕ್ಷಮಿಸುವುದಿಲ್ಲ. ಆದ್ದರಿಂದ, ಸಿಪಿಎಂ ಸರ್ಕಾರವು ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಆಯಪ್ಪ ಸಂಗಮ ನಡೆಸುವುದು ನಾಟಕ ಮತ್ತು "ಜನರನ್ನು ಮರಳು ಮಾಡುವ ತಂತ್ರವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

