ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 6ರ ವರೆಗೆ ಜರುಗಲಿರುವ 70ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ 'ಸಪ್ತತಿ ಮಹೋತ್ಸವ'ದ ಯಜ್ಞಕುಂಡ ಮುಹೂರ್ತ ನೆರವೇರಿತು.
ಶಿಲ್ಪಿ ಶ್ರೀ ರಮೇಶ್ ಕಾರಂತ ಅವರ ನಿರ್ದೇಶನದಲ್ಲಿ ಕಾರ್ಯಕ್ರಮ ಜರಗಿತು. ಈ ಸಂದರ್ಭ ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ, ಸಮಿತಿ ಅಧ್ಯಕ್ಷ ವಕೀಲ ಮುರಳೇಧರ, ಉಪಾಧ್ಯಕ್ಷರಾದ ಡಾ. ಕೆ.ಎನ್. ವೆಂಕಟ್ರಮಣ ಹೂಳ್ಳ, ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಕೆ.ಎನ್., ಕಾರ್ಯದರ್ಶಿ ರವಿ ಕೇಸರಿ, ರವಿ ಕೇಳುಗುಡ್ಡೆ, ಕೋಶಾಧಿಕಾರಿ ಅಶೋಕ್ ಕುಮಾರ್, ಉಮೇಶ್ ಮೇಸ್ತ್ರಿ, ಲವ ಮೀಪುಗುರಿ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.ಸಪ್ತತಿ ಮಹೋತ್ಸವದ ಅಂಗವಾಗಿ ಶ್ರೀ ಗಣೇಶ ಸನ್ನಿಧಿಯಲ್ಲಿ ಅಯುತ ನಾಳಿಕೇರ ಶ್ರೀ ಮಹಾ ಗಣಪತಿಯಾಗ (10008 ನಾಳಿಕೇರ ಮಹಾ ಗಣಪತಿಯಾಗ) ನಡೆಯಲಿರುವುದು. ಕುಟುಂಬ ಐಕ್ಯಮತ್ಯ ಮುಂತಾದ ಶುಭಫಲ ತಂದುಕೊಡಬಲ್ಲ ಅಯುತ ನಾಳಿಕೇರ ಶ್ರೀ ಮಹಾ ಗಣಪತಿಯಾಗಕ್ಕೆ ಎಲ್ಲಾ ಹಿಂದೂ ಮನೆಗಳಿಂದ ಯಾಗ ಸಮರ್ಪಣೆಗೆ ಬೇಕಾದ ಕೊಬ್ಬರಿಕಾಯಿ ಸಹಿತ ರೂ. 101 ದಕ್ಷಿಣೆಯನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರ ಪರವಾಗಿ ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


