ಬದಿಯಡ್ಕ: ಅಂತಾರಾಜ್ಯ ಸಂಪರ್ಕದ ರಾಜ್ಯಹೆದ್ದಾರಿ ಚೆರ್ಕಳ-ಕಲ್ಲಡ್ಕ ರಸ್ತೆಯ ಪಳ್ಳತ್ತಡ್ಕ ಸೇತುವೆಯ ಶಿಥಿಲಾವಸ್ಥೆ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಸೂಚನಾ ಫಲಕ ನೆಟ್ಟಿದ್ದಾರೆ. ಪಳ್ಳತ್ತಡ್ಕ ಸೇತುವೆ ನಾಲ್ಕು ವರ್ಷಕ್ಕೂ ಮೊದಲು ಶಿಥಿಲಾವಸ್ಥೆ ತಲುಪಿದ್ದರೂ, ಇದಕ್ಕೆ ತೇಪೆ ಹಚ್ಚುವ ಕೆಲಸ ಇಲಾಖೆ ನಡೆಸುತ್ತಾ ಬಂದಿದೆ ಹೊರತು, ಬದಲಿ ವ್ಯವಸ್ಥೆಗೆ ಮುಂದಾಗಿಲ್ಲ. ಸೇತುವೆ ದೃಢತೆ ಬಗ್ಗೆ ತಪಾಸಣೆಗಾಗಿ ಲಕ್ಷಾಂತರ ರೂ. ವೆಚ್ಚ ನಡೆಸಿರುವ ಇಲಾಖೆ, ನಂತರ ತೇಪೆ ಹಚ್ಚಿ ಸುಮ್ಮನಾಗಿದೆ.
ಸೇತುವೆಯ ತಳಭಾಗದ ಸ್ಲ್ಯಾಬ್ ಕಿತ್ತುಕೊಂಡು ಕಾಂಕ್ರೀಟಿಗೆ ಅಳವಡಿಸಿದ್ದ ಕಬ್ಬಿಣ ಹೊರ ಬಂದಿತ್ತು. ಅಲ್ಲದೆ ಸೇತುವೆ ಮೇಲ್ಭಾಗದ ಕಾಂಕ್ರೀಟು ಕಿತ್ತು ಶಿಥಿಲಾವಸ್ಥೆಯಲ್ಲಿದ್ದ ಸೇತುವೆಗೆ ಮೂರು ವರ್ಷದ ಹಿಂದೆ ತಾತ್ಕಾಲಿಕ ಕಾಮಗಾರಿ ನಡೆಸಲಾಗಿತ್ತು. ಕೇರಳ-ಕರ್ನಾಟಕ ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಖಾಸಗಿ, ಕೆಸ್ಸಾರ್ಟಿಸಿ ಬಸ್‍ಗಳು, ಭಾರೀ ಗಾತ್ರದ ಲಾರಿಗಳ ಸಹಿತ ನೂರಾರು ವಾಹನಗಳು ಈ ಹಾದಿಯಾಗಿ ಸಂಚರಿಸುತ್ತಿರುವುದರಿಂದ ಪಳ್ಳತ್ತಡ್ಕ ಸಏತುವೆಯ ಶಿಥಿಲಾವಸ್ಥೆ ಚಾಲಕರಲ್ಲಿ ಆತಂಕ ತಂದೊಡ್ಡಿದೆ.
ಮೂರು ವರ್ಷದ ಹಿಂದೆ ಚೆರ್ಕಳ-ಕಲ್ಲಡ್ಕ ರಸ್ತೆಯನ್ನು ಚೆರ್ಕಳದಿಂದ ಅಡ್ಕಸ್ಥಳ ವರೆಗಿನ 29ಕಿ.ಮೀ ರಸ್ತೆಯನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ನಡೆಸಲಾಗಿದ್ದರೂ, ಇದರಲ್ಲಿ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರು ಕಾಮಗಾರಿಯನ್ನು ಇನ್ನೂ ಪೂರ್ತಿಗೊಳಿಸಿಲ್ಲ. ನಡೆಸಿರುವ ಕಾಮಗಾರಿಯೂ ಕಳಪೆಯಾಗಿದ್ದು, ಎಡನೀರು, ಚೇಡೆಕ್ಕಲ್, ಪಳ್ಳತ್ತಡ್ಕ ಸೇರಿದಂತೆ ವಿವಿಧೆಡೆ ರಸ್ತೆ ಹೇಳ ಹೆಸರಿಲ್ಲದಂತೆ ಹಾನಿಗೊಂಡಿದೆ. ಪಳ್ಳತ್ತಡ್ಕ ಸೇತುವೆ ಸನಿಹ ಉಂಟಾಗಿದ್ದ ಬೃಹತ್ ಹೊಂಡಗಳಿಂದ ವಾಹನ ಸಂಚಾರ ದುಸ್ತರಗೊಂಡಿದ್ದ ಹಿನ್ನೆಲೆಯಲ್ಲಿ ಊರವರು ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದರು. ರಸ್ತೆಕಾಮಗಾರಿ ಕೈಗೆತ್ತಿಕೊಳ್ಳುವ ವೇಳೆಗೇ ಸೇತುವೆ ಪುನ:ನಿರ್ಮಾಣದ ಬಗ್ಗೆ ಬೇಡಿಕೆ ಬಂದಿದ್ದರೂ, ಅಧಿಕಾರಿಗಳು ಇದನ್ನು ಗಣನೆಗೆ ತೆಗೆದುಕೊಳ್ಳದೆ ಸೇತುವೆಗೆ ತೇಪೆ ಹಚ್ಚಿ ಕೈತೊಳೆದುಕೊಂಡಿದ್ದರು. ವಿಪರ್ಯಾಸವೆಂದರೆ ಹೊಸ ಸೇತುವೆ ಸನಿಹ ಬ್ರಿಟಿಷರ ಕಾಲಾವಧಿಯಲ್ಲಿ ನಿರ್ಮಿಸಲಾಗಿರುವ ಹಳೇ ಸೇತುವೆ ಇನ್ನೂ ದೃಢವಾಗಿ ನಿಂತಿದೆ. ಮೂರು ದಶಕದ ಹಿಂದೆ ನಿರ್ಮಿಸಿರುವ ಹೊಸ ಸೇತುವೆ ಶಿಥಿಲಗೊಂಡಿರುವುದು ಆತಂಕಕ್ಕೂ ಕಾರಣವಾಗಿದೆ.
ಮೇಲ್ನೋಟಕ್ಕೆ ಸೇತುವೆ ಸುಸ್ಥಿತಿಯಲ್ಲಿದ್ದರೂ, ಸೇತುವೆಯ ಮೂರು ಸ್ಪ್ಯಾನ್‍ಗಳಲ್ಲಿ ಒಂದು ಹೆಚ್ಚು ದುರ್ಬಲಗೊಂಡಿದೆ. ಸೇತುವೆಯ ತಳಭಾಗದ ಸ್ಲ್ಯಾಬ್‍ನ ಚಪ್ಪಡಿ ಕಿತ್ತು ಬೀಳುತ್ತಿದೆ. ಘನ ವಾಹನಗಳ ಸಂಚಾರದ ಮಧ್ಯೆ ಜಾಗ್ರತೆ ಪಾಲಿಸುವಂತೆ ಲೋಕೋಪಯೋಗಿ ಇಲಾಖೆ ಸೇತುವೆ ವಿಭಾಗದ ಅಧಿಕಾರಿಗಳು ಸೇತುವೆ ಎರಡೂ ಭಾಗದಲ್ಲಿ ಫಲಕ ನೆಟ್ಟಿದ್ದಾರೆ.
ಅಭಿಮತ:
-ಸೇತುವೆ ಶಿಥಿಲಗೊಂಡಿದ್ದರೂ, ವಾಹನ ಸಂಚಾರಕ್ಕೆ ಯಾವುದೇ ತೊಡಕುಂಟಾಗದು. ಹೆಚ್ಚಿನ ಭಾರ ಹೇರಿ ಸಾಗುವ ಘನ ವಾಹನಗಳ ಸಂಚಾರದ ಮಧ್ಯೆ ಚಾಲಕರು ಜಾಗ್ರತೆ ಪಾಲಿಸುವ ನಿಟ್ಟಿನಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಸೇತುವೆ ಶಿಥಿಲಾವಸ್ಥೆ ಬಗ್ಗೆ ತಜ್ಞರ ವರದಿ ಪ್ರಕಾರ ಹಳೇ ಸೇತುವೆ ಒಡೆದು ತೆರವುಗೊಳಿಸಿ, ಈ ಪ್ರದೇಶದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಯೋಜನೆಯಿರಿಸಿಕೊಳ್ಳಲಾಗಿದೆ.
*ಭರತನ್ ಆರ್. ಸಹಾಯಕ ಅಭಿಯಂತ
ಲೋಕೋಪಯೋಗಿ ಇಲಾಖೆ, ಬದಿಯಡ್ಕ ವಿಭಾಗ



