ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ಕುಂಬಳೆಯಲ್ಲಿ ನಿರ್ಮಿಸಲು ಉದ್ದೇಶಿಸಿ, ಕಾಮಗಾರಿ ಆರಂಭಗೊಳ್ಳುತ್ತಿರುವಂತೆ ಎರಡು ತಿಂಗಳ ಹಿಂದೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ವ್ಯಕ್ತವಾದ ಬಳಿಕ ನಿಲುಗಡೆಗೊಳಿಸಲಾಗಿದ್ದ ಟೋಲ್ ಪ್ಲಾಜ್ಹಾ ಕಾಮಗಾರಿ ಅನಿರೀಕ್ಷಿತವಾಗಿ ಗುರುವಾರ ಸಂಜೆ ಮತ್ತೆ ಪೋಲೀಸ್ ಸಂರಕ್ಷಣೆಯಲ್ಲಿ ಪುನರಾರಂಭಗೊಂಡಿತು.
ಈ ಹಿಂದೆ ಕ್ರಿಯಾ ಸಮಿತಿಯ ತೀವ್ರ ಪ್ರತಿಭಟನೆ ಕಾರಣ ಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು. ಗುರುವಾರ ಸಂಜೆ ಕಾಮಗಾರಿ ಪುನರಾರಂಭಗೊಳ್ಳುತ್ತಿರುವಂತೆ ಧಾವಿಸಿದ ಕ್ರಿಯಾ ಸಮಿತಿಯ 6 ಮಂದಿ ಪದಾಧಿಕಾರಿಗಳನ್ನು ಪೋಲೀಸರು ಬಂಧಿಸಿದರು. ಎ.ಕೆ.ಆರಿಫ್, ಅಶ್ರಫ್ ಕಾರ್ಲೆ, ಸಿ.ಎ.ಸುಬೈರ್, ಅನ್ವರ್ ಆರಿಕ್ಕಾಡಿ, ಲಕ್ಷ್ಮಣ ಪ್ರಭು ಕುಂಬಳೆ, ನಾಸರ್ ಮೊಗ್ರಾಲ್ ಎಂಬವರನ್ನು ಬಂಧಿಸಲಾಗಿದೆ. ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಿದ ಬಳಿಕ ಕಾರ್ಯಕರ್ತರೊಂದಿಗೆ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ರಾಷ್ಟ್ರೀಯ ಹೆದ್ಧಾರಿ ನಿರ್ಮಾಣ ಕಂಪೆನಿ ಅಧಿಕೃತರೊಂದಿಗೆ ನಡೆಸಿದ ಚರ್ಚೆಯ ಭಾಗವಾಗಿ ನಿರ್ಮಾಣ ಕಾರ್ಯ ಮತ್ತೆ ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ತಿಳಿದುಬಂದಿದೆ.
ಕುಂಬಳೆ ಬಳಿಯ ಅರಿಕ್ಕಾಡಿ ಸೇತುವೆಯ ಬಳಿ ಟೋಲ್ ಬೂತ್ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದರೂ, ವಿವಿಧ ಸಂಘಟನೆಗಳು ಮತ್ತು ಟೋಲ್ ಬೂತ್ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆದಿತ್ತು. ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣವು ಟೋಲ್ ಬೂತ್ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿಯ ನಿಬಂಧನೆಗಳಿಗೆ ವಿರುದ್ಧವಾಗಿದೆ ಮತ್ತು ಆದ್ದರಿಂದ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣವನ್ನು ನಿಲ್ಲಿಸಬೇಕು ಎಂದು ವಿವಿಧ ಸಂಘಟನೆಗಳು ಹೈಕೋರ್ಟ್ಗೆ ದೂರು ನೀಡಿದ್ದವು. ನ್ಯಾಯಾಲಯವು ಈ ದೂರನ್ನು ತಿರಸ್ಕರಿಸಿದ ನಂತರ, ಟೋಲ್ ಬೂತ್ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದೆ.

.jpg)
.jpg)
.jpg)
