ಕಾಸರಗೋಡು: ಉಪ ನೋಂದಾವಣಾ ಕಚೇರಿಗಳಲ್ಲಿ ಭೂದಾಖಲೆಗಳ ದತ್ತಾಂಶ ನಮೂದು ಇಂಗ್ಲಿಷ್ ಹೊರತುಪಡಿಸಿ ಯಾವುದೇ ಭಾಷೆಯಲ್ಲಿ ಮಾಡದೇ ಮಲಯಾಳಂನಲ್ಲಿ ಮಾತ್ರ ಮಾಡಬೇಕು ಎಂಬ ರಿಜಿಸ್ಟ್ರಾರ್ ಇಲಾಖೆಯ ಹೊಸ ಅಧಿಸೂಚನೆಯು ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಸಮಸ್ಯೆಯಾಗಲಿದ್ದು, ಈ ಆದೇಶ ವಾಪಾಸುಪಡೆಯುವಂತೆ ಶಾಸಕ ಎ.ಕೆ.ಎಂ ಅಶ್ರಫ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಜೇಶ್ವರ, ಬದಿಯಡ್ಕ ಹಾಗೂ ಕಾಸರಗೋಡಿನ ಸಬ್ ರಿಜಿಸ್ಟ್ರಾರ್ ವ್ಯಾಪ್ತಿಯಲ್ಲಿ ಬರುವ ಭೂದಾಖಲೆಗಳು ಬಹುಪಾಲು ಕನ್ನಡದಲ್ಲಿದೆ. ಕನ್ನಡ ಭಾಷಾ ಅಲ್ಪಸಂಖ್ಯಾಕರು ತಮ್ಮ ಭೂದಾಖಲೆಗಳ ದಸ್ತಾವೇಜು,ದತ್ತಾಂಶ ಎಲ್ಲವನ್ನೂ ಕನ್ನಡದಲ್ಲಿಯೇ ನಮೂದಿಸುತ್ತಾರೆ. ಈ ಮೂಲಕ ಕನ್ನಡ ಮಾತ್ರ ಬಲ್ಲ ಇಲ್ಲಿನ ಭಾಷಾ ಅಲ್ಪಸಂಖ್ಯಾತರಿಗೆ ದಸ್ತಾವೇಜುಗಳನ್ನು ಓದಿ ಮನನ ಮಾಡಿಕೊಳ್ಳುವುದು ಸುಲಭವಾಗುತ್ತಿದೆ. ಸರ್ಕಾರದ ಹೊಸ ಆದೇಶವು ಸಮಸ್ಯೆಗೆ ಕಾರಣವಾಗಲಿದ್ದು, ಈ ಬಗ್ಗೆ ಮಧ್ಯ ಪ್ರವೇಶಿಸಿ ಅಧಿಸೂಚನೆಯನ್ನು ಹಿಂಪಡೆಯಬೇಕು. ಈ ಬಗ್ಗೆ ನೋಂದಣಿ ಇಲಾಖೆ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಮತ್ತು ನೋಂದಣಿ ಇನ್ಸ್‍ಪೆಕ್ಟರ್ ಜನರಲ್ ಶ್ರೀಧನ್ಯ ಸುರೇಶ್ ಐಎಎಸ್ ಅವರಿಗೂ ವಿಷಯ ಮನವರಿಕೆ ಮಾಡಿಕೊಡಲಾಗಿದೆ. ಗಡಿನಾಡು ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶದ ಜನರಿಗೆ ಕನ್ನಡ ಅಥವಾ ಇಂಗ್ಲಿಷ್‍ನಲ್ಲಿ ನೋಂದಣಿ ದತ್ತಾಂಶ ಮಾಡಬೇಕಾದ ಅಗತ್ಯದ ಬಗ್ಗೆ ಪತ್ರದಲ್ಲಿ ತಿಳಿಸಿರುವುದಾಗಿ ಶಾಸಕ ಎ.ಕೆ.ಎಂ ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡಿನ ಉಪನೋಂದಾವಣಾ ಕಚೇರಿಯಲ್ಲಿ ಕನ್ನಡ ಕೈಬಿಡುವ ಸರ್ಕಾರದ ಪ್ರಸ್ತಾವನೆ ಬಗ್ಗೆ 'ವಿಜಯವಾಣಿ'ವಿಶೇಷ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಸೆಳೆದಿತ್ತು.


