ಕಾಸರಗೋಡು: ಕಳೆದ ಒಂದು ತಿಂಗಳಿಂದ ಮುಳಿಯಾರು ಪಂಚಾಯಿತಿ ಆಲೂರಿನಲ್ಲಿ ಸಾರ್ವಜನಿಕರಲ್ಲಿ ಭೀತಿಯನ್ನು ಸೃಷ್ಟಿಸಿದ್ದ ಕಾಡು ಹಂದಿಯನ್ನು ಅರಣ್ಯ ಇಲಾಖೆ ವಿಶೇಷ ತಂಡ ಗುಂಡಿಟ್ಟು ಹತ್ಯೆಗೈದಿದೆ. ಮುಳಿಯಾರು ಗ್ರಾಪಂ ಅಧ್ಯಕ್ಷೆ ಪಿ.ವಿ ಮಿನಿ ಅವರ ನಿರ್ದೇಶ ಪ್ರಕಾರ ಅರಣ್ಯ ಇಲಾಖೆ ಸಹಾಯಕ ರೇಂಜ್ ಅಧಿಕಾರಿ ಎನ್.ವಿ ಸತ್ಯನ್, ಸೀನಿಯರ್ ಶೂಟರ್ ಬಿ. ಅಬ್ದುಲ್ ಗಫೂರ್ ನೇತೃತ್ವದ ಪ್ರತ್ಯೇಕ ತಂಡ ಕಾರ್ಯಚರಣೆ ನಡೆಸಿದೆ.
ಆಲೂರು ಆಸುಪಾಸು ಕಳೆದ ಒಂದು ತಿಂಗಳಿಂದ ವ್ಯಾಪಕವಾಗಿ ಕೃಷಿನಾಶ ಹಾಗೂ ಜನರಿಗೂ ಉಪಟಳ ನೀಡುವ ಮೂಲಕ ಕಾಡುಹಂದಿ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಮಾಡಿತ್ತು. ಹತ್ಯೆಗೈದ ಕಾಡುಹಂದಿಯನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಯಿತು. ಕೃಷಿನಾಶ ಹಾಗೂ ಜನರ ಪ್ರಾಣಕ್ಕೆ ಆಪತ್ತು ತಂದೊಡ್ಡುತ್ತಿರುವ ಕಾಡುಹಂದಿಗಳನ್ನು ಶಾರ್ಪ್ ಶೂಟರ್ ಬಳಸಿ ಹತ್ಯೆಗೈಯಲು ಸರ್ಕಾರವೂ ಪ್ರತ್ಯೇಕ ಆದೇಶ ಹೊರಡಿಸಿದೆ.

